ಭದ್ರವಾಗಬೇಕು ಹಿಂದುತ್ವದ ನೆಲೆಗಟ್ಟು

sri vhp
ಶೃಂಗೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮೊಸರು ಕುಡಿಕೆ ಉತ್ಸವದ ಸಭಾಕಾರ್ಯಕ್ರಮದಲ್ಲಿ ಮಂಗಳೂರು ವಿಹಿಂಪ ಪ್ರಚಾರ ವಿಭಾಗದ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರನ್ನು ಸನ್ಮಾನಿಸಲಾಯಿತು. ದಿವೀರ್ ಮಲ್ನಾಡ್, ಕೆ.ಪಿ.ಸುರೇಶ್, ಶ್ರೀನಿವಾಸ್ ಕಚ್ಚೋಡಿ ಇತರರಿದ್ದರು.
Published on

ಶೃಂಗೇರಿ: ಸಾವಿರಾರು ವರ್ಷಗಳ ಹಿಂದೆ ವಿಶ್ವಕ್ಕೆ ಸಂಸ್ಕೃತಿ, ಸಂಸ್ಕಾರ ಮೌಲ್ಯಗಳನ್ನು ನೀಡಿದ ದೇಶ ಭಾರತ. ಸರ್ವರಿಗೂ ಬೆಳಕನ್ನು ತೋರಿದ ಮಹಾಮಹೀಮರು ಜನಿಸಿದ ಪುಣ್ಯಭೂಮಿಯಲ್ಲಿ ಹಿಂದುತ್ವದ ನೆಲೆಗಟ್ಟು ಇನ್ನಷ್ಟು ಭದ್ರವಾಗಬೇಕಿದೆ ಎಂದು ಮಂಗಳೂರು ವಿಹಿಂಪ ಪ್ರಚಾರ ವಿಭಾಗದ ಪ್ರಮುಖ್ ಪ್ರದೀಪ್ ಸರಿಪಲ್ಲ ಹೇಳಿದರು.

ಗುರುವಾರ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ವಿಹಿಂಪ ಹಾಗೂ ಬಜರಂಗದಳ ಶೃಂಗೇರಿ ಪ್ರಖಂಡ ಆಯೋಜಿಸಿದ್ದ ಜಿಲ್ಲಾಮಟ್ಟದ ಮೊಸರು ಕುಡಿಕೆ ಉತ್ಸವದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಮ್, ಈಜಿಫ್ಟ್ ಸಂಸ್ಕೃತಿ ಮರೆಯಾದರೂ ಹಿಂದು ಸಂಸ್ಕೃತಿ ಉಳಿದಿದೆ. ಎಷ್ಟೋ ಆಕ್ರಮಣಗಳನ್ನು ನಾವು ಎದುರಿಸಿದ್ದರೂ ಶತ್ರು ಪಡೆಗಳನ್ನು ಹಿಮ್ಮೆಟ್ಟಿಸಿದ್ದೇವೆ. ಅನಾದಿಕಾಾಲದಿಂದಲೂ ಭಾರತವನ್ನು ಒಡೆಯುವ ಕುತಂತ್ರ ನಡೆಯುತ್ತಲೇ ಇದೆ. ಭಾರತಕ್ಕೆ ಭವ್ಯಪರಂಪರೆ ಇದೆ. ಲಕ್ಷಾಂತರ ಗುರುಕುಲವಿದ್ದು ಜಾತಿ, ಮತ, ಪಂಥಗಳನ್ನು ಮೀರಿ ಶಿಕ್ಷಣ ಪಡೆದ ಇತಿಹಾಸ ನಮ್ಮದು. ಮೆಕಾಲೆ ತಂದ ಶಿಕ್ಷಣದಿಂದ ಶಾಲೆಗಳು ಪ್ರಾರಂಭಗೊಂಡು ಧರ್ಮಶಿಕ್ಷಣದ ಪರಿಕಲ್ಪನೆ ಪ್ರಸ್ತುತ ದೂರವಾಗಿದೆ ಎಂದರು.
ಬಜರಂಗದಳ ಜಿಲ್ಲಾ ಸಂಯೋಜಕ ಅಜಿತ್ ಕುಲಾಲ್ ಮಾತನಾಡಿ, ಭ್ರಾತೃತ್ವದ ಭಾವ ನಮ್ಮಲ್ಲಿದ್ದಾಗ ಮಾತ್ರ ಧರ್ಮ ಬೆಳೆಯುತ್ತದೆ.ನಮ್ಮೊಳಗಿನ ವಿಚಾರಗಳನ್ನು ಪ್ರತಿ ಹಿಂದು ಆಚರಣೆಗೆ ತರಬೇಕು. ಐಕಮತ್ಯ ಬದುಕಿನ ಪ್ರಮುಖ ಧ್ಯೇಯವಾದಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮಲ್ಲಿ ಒಡಕು ಉಂಟಾದರೆ ದೇಶದ ಉನ್ನತಿಗೆ ಮಾರಕ ಎಂದು ಹೇಳಿದರು.
ಸಾಮಾಜಿಕ ಚಿಂತಕ ಕೆ.ಎಂ.ಶ್ರೀನಿವಾಸ್, ವಿಹಿಂಪ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್, ಗೋರಕ್ಷಾ ಪ್ರಮುಖ್ ಶಶಾಂಕ್ ಹೇರೂರು, ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್, ನಾಗೇಶ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net