ನದಿ ದಂಡೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ ತೆರವು

5 skpp 1
Published on

ಸಕಲೇಶಪುರ : ಹೇಮಾವತಿ ನದಿ ದಂಡೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೊಬ್ಬರು ಅನಧಿಕೃತವಾಗಿ ನಿರ್ಮಿಸಿದ್ದ ತಡೆಗೋಡೆಯನ್ನು ತಾಲೂಕು ಆಡಳಿತ ಶನಿವಾರ ಬೆಳಗ್ಗೆ ತೆರವುಗೊಳಿಸಿದೆ.


2019 ರಲ್ಲಿ ಮಳೆಗಾಲದಲ್ಲಿ ಹೇಮಾವತಿ ಪ್ರವಾಹ ಕಲ್ಯಾಣ ಮಂಟಪವನ್ನು ಅವರಿಸಿದ್ದರಿಂದ ಭಾರಿ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಿತ್ತು. ಇದರಿಂದ ಕಲ್ಯಾಣ ಮಂಪಟದ ಸನಿಹ ಹಿನ್ನೀರು ನಿಲುಗಡೆಯಾಗುವ ಭತ್ತದ ಗದ್ದೆಗಳಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಹಾಕಿ ಸಮತಟ್ಟುಮಾಡಲಾಗಿತ್ತು. ಆದರೂ ನದಿ ನೀರು ಕಲ್ಯಾಣ ಮಂಟಪಕ್ಕೆ ನುಗ್ಗುವುದನ್ನು ತಡೆಗಟ್ಟಲು ಸಾಧ್ಯವಾಗಿರಲಿಲ್ಲ.


ಆದ್ದರಿಂದ, ಕಳೆದೊಂದು ವರ್ಷದಿಂದ ನದಿಗೆ ಹೊಂದಿಕೊಂಡಂತೆ ಭಾರಿ ಪ್ರಮಾಣದ ತಡೆಗೋಡೆ ನಿರ್ಮಿಸಲಾಗುತಿತ್ತು. ತಡೆಗೋಡೆ ನಿರ್ಮಾಣವಾದರೆ ನದಿ ನೀರು ಹಿಮ್ಮುಖವಾಗಿ ಚಲಿಸಿ ಪಟ್ಟಣಕ್ಕೆ ನುಗ್ಗಲಿದೆ ಎಂಬ ದೂರುಗಳು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿ ಬಂದಿತ್ತು. ಇದರಿಂದ ಹಲವು ಬಾರಿ ತಡೆಗೋಡೆ ನಿರ್ಮಾಣಕ್ಕೆ ತಾಲೂಕು ಆಡಳಿತ ತಡೆ ಒಡ್ಡಿತ್ತಾದರು ರಜೆ ದಿನಗಳಲ್ಲಿ ಕಾಮಗಾರಿ ಎಗ್ಗಿಲ್ಲದೆ ಸಾಗಿತ್ತು. ಇದರಿಂದ ಬಹುತೇಕ ಕಾಮಗಾರಿ ಮುಕ್ತಾಯದ ಹಂತಕ್ಕೆ ತಲುಪಿತ್ತು.


ಈ ಬಗ್ಗೆ ವ್ಯಾಪಕ ವಿರೋಧಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ನಿರ್ದೇಶನದಂತೆ ಶನಿವಾರ ತಹಸೀಲ್ದಾರ್ ಮೇಘನಾ ನೇತೃತ್ವವದಲ್ಲಿ ತಾಲೂಕು ಆಡಳಿತ ಸರ್ವಸಿದ್ಧತೆಯೊಂದಿಗೆ ಮುಂಜಾನೆ ಕಾರ್ಯಾಚರಣೆ ನಡೆಸಿ ತಡೆಗೋಡೆ ತೆರವುಗೊಳಿಸಿತು. ಈ ವೇಳೆ ಬಿಗಿಪೋಲಿಸ್ ಬಂದುಬಸ್ತ್ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net