ಕಾಳಿ ಸೇತುವೆ ಮುರಿಯಲು ಬಂದ ಬಾರ್ಜ್

barge
Published on

ಕಾರವಾರ: ಮುರಿದು ಬಿದ್ದ ಕಾಳಿ ಸೇತುವೆಯ ಅವಶೇಷಗಳನ್ನು ತೆರವು ಮಾಡಲು ಬಾರ್ಜ್ ಕೋಡಿಬಾಗದ ಅಳಿವೆಗೆ ತಲುಪಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ವಿಸ್ತರಣೆ ಕಾಮಗಾರಿ ಕೈಗೊಂಡಿರುವ ಐಆರ್‌ಬಿ ಕಂಪನಿಯೇ ಸೇತುವೆಯ ಅವಶೇಷಗಳನ್ನು ತೆರವು ಮಾಡುತ್ತಿದೆ. ಈಗಾಗಲೇ ಕೋಡಿಬಾಗ ಕಡೆಯಿಂದ ನೆಲದ ಮೇಲೆ ನಿಂತು ಯಂತ್ರಗಳ ಮೂಲಕ ಸೇತುವೆಯ ಅವಶೇಷಗಳನ್ನು ಒಡೆಯುವ ಕಾರ್ಯ ಪ್ರಗತಿಯಲ್ಲಿದೆ. ನದಿಯ ನಡುವಿನಲ್ಲಿರುವ ಸೇತುವೆಯ ಅವಶೇಷಗಳನ್ನು ಒಡೆಯಲು ಬಾರ್ಜ್ ತರಿಸಲಾಗಿದ್ದು, ಕೆಲ ದಿನಗಳ ಹಿಂದೆಯೇ ಅದು ಬೈತಖೋಲ್ ವಾಣಿಜ್ಯ ಬಂದರಿಗೆ ತಲುಪಿತ್ತು. ಈಗ ಅದರ ಮೇಲೆ ಕ್ರೇನ್ ಹಾಗೂ ಕಲ್ಲು ಒಡೆಯುವ ಯಂತ್ರವನ್ನು ಅಳವಡಿಸಿಕೊಂಡು ಬುಧವಾರ ಬಾರ್ಜ್ನ್ನು ಅಳಿವೆ ಸಮೀಪ ಕೊಂಡೊಯ್ಯಲಾಗಿದೆ. ಒಂದೆರಡು ದಿನದಲ್ಲಿ ಬಾರ್ಜ್ ಮೂಲಕ ಕಾರ್ಯಾಚರಣೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಬಾರ್ಜ್ ನಿಲ್ಲಿಸುವ ಸಲುವಾಗಿ ಅಳಿವೆವಾಡದಲ್ಲಿ ಐಆರ್‌ಬಿಯಿಂದ ಜಟ್ಟಿಯೊಂದನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ನಂತರ ಹಂತ ಹಂತವಾಗಿ ಬ್ರಿಜ್‌ನ ಕಂಬ ಹಾಗೂ ಪಳೆಯುಳಿಕೆಗಳನ್ನು ಕೆಡವಲಾಗುವುದು. ಅದಕ್ಕೆ ಸುಮಾರು 3 ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಐಆರ್‌ಬಿ ಅಧಿಕಾರಿಗಳು ತಿಳಿಸಿದ್ದಾರೆ. ಕೋಡಿಬಾಗ ಹಾಗೂ ಸದಾಶಿವಗಡ ನಡುವೆ ಕಾಳಿ ನದಿಗೆ ನಿರ್ಮಿಸಲಾದ ಹಳೆಯ ಸೇತುವೆಯು ಆಗಸ್ಟ್ 6 ರ ರಾತ್ರಿ ಕುಸಿದು ಬಿದ್ದಿತ್ತು. ಎರಡು ಕಂಬಗಳ ನಡುವಿನ ಭಾಗ ನೀರಿಗೆ ಆಹುತಿಯಾಗಿತ್ತು.
ಸೇತುವೆಯ ಅವಶೇಷಗಳನ್ನು ತೆರವು ಮಾಡಿ, ಹೊಸ ಸೇತುವೆ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ಗೆ ಕ್ಕೆ ಸೂಚಿಸಿತ್ತು.ಎನ್‌ಎಚ್‌ಎಐ ಸೂಚನೆಯಂತೆ ಐಆರ್‌ಬಿ ಸೇತುವೆ ತೆರವು ಕಾರ್ಯ ಪ್ರಾರಂಭಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net