ಗಣೇಶೋತ್ಸವಕ್ಕೆ ಕಟ್ಟಿದ ಬ್ಯಾನರ್ ಈದ್ ಮೀಲಾದ್ ವೇಳೆ ನಾಶ, ಶಾಸಕ ಬಸನಗೌಡ ಪಾಟೀಲ ಯತ್ನಾಳರ ಭಾವಚಿತ್ರ ಹರಿದ ಕಿಡಿಗೇಡಿಗಳು, ಧಾರ್ಮಿಕ ಧ್ವಜ ಬಳಸಿ ಬ್ಯಾನರ್‌ಗೆ ಧಕ್ಕೆ !

YATNAL BANNER
ವಿಜಯಪುರದ ಛತ್ರಪತಿ ಶಿವಾಜಿ ಮಹಾರಾಜದ ವೃತ್ತದಲ್ಲಿ ಅಳವಡಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬ್ಯಾನರ್ ಹರಿದಿರುವುದು. ಪಕ್ಕದಲ್ಲಿ ಮೊದಲಿದ್ದ ಬ್ಯಾನರ್‌ನ ದೃಶ್ಯವಿದೆ.
Published on

ವಿಜಯಪುರ: ಗಣೇಶೋತ್ಸವ ಹಿನ್ನೆಲೆ ಅಳವಡಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಬೃಹತ್ ಬ್ಯಾನರ್ ಈದ್ ಮೀಲಾದ್ ಆಚರಣೆ ವೇಳೆ ಕಿಡಿಗೇಡಿಗಳು ಹರಿದು ವಿಕೃತಿ ಮೆರೆದಿದ್ದಾರೆ !

ಐತಿಹಾಸಿಕ ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ವೃತ್ತದ ಬಳಿ ಅಳವಡಿಸಿದ ಬೃಹತ್ ಕಟೌಟ್ ಗುರುವಾರ ಈದ್ ಮಿಲಾದ್ ನಿಮಿತ್ತ ಹಮ್ಮಿಕೊಂಡ ಜಾಥಾ ವೇಳೆ ಹರಿಯಲಾಗಿದೆ. ಮೆರವಣಿಗೆ ವೇಳೆ ಹಸಿರು ಬಣ್ಣದ ಧಾರ್ಮಿಕ ಧ್ವಜ ಹಾರಾಡಿಸುತ್ತ ಅದರ ಕಟ್ಟಿಗೆಯ ಮೊನಚಾದ ತುದಿಯಿಂದ ಬ್ಯಾನರ್‌ಗೆ ಧಕ್ಕೆ ಮಾಡಲಾಗಿದೆ. ಈ ದೃಶ್ಯಾವಳಿಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಯತ್ನಾಳ ಬೆಂಬಲಿಗರು ಹಾಗೂ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ದೌಢಾಯಿಸಿ ಪರಿಶೀಲಿಸಿದರು. ಶ್ರೀರಾಮ ಸೇನೆ ಮುಖಂಡ ನೀಲಕಂಠ ಕಂದಗಲ್ಲ ಆಕ್ರೋಶ ಹೊರಹಾಕುತ್ತಾ, ಇದೊಂದು ಉದ್ದೇಶಪೂರ್ವಕ ಕೃತ್ಯ. ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಿಡಿಗೇಡಿಗಳನ್ನು ಚದುರಿಸಿದ್ದಾರೆ. ಬಳಿಕ ಬ್ಯಾನರ್ ಸಂಪೂರ್ಣ ತೆಗೆದು ಹಾಕಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಪಿ ಭಗವಾನ ಋಷಿಕೇಶ ಸೋನವಾನೆ ಅವರನ್ನು ಸಂಪರ್ಕಿಸಲಾಗಿ ಮಾಹಿತಿ ಕಲೆಹಾಕುತ್ತಿದ್ದು ಕೂಡಲೇ ಪರಿಶೀಲಿಸಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net