

ಮೈಸೂರು: ನಗರದ ಚಾಮುಂಡಿಬೆಟ್ಟದ ತಪ್ಪಲಿನ ಜೆಸಿ ನಗರದಲ್ಲಿರುವ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಬಾಹುಬಲಿ ಮೇಣದ ಪ್ರತಿಮೆಯನ್ನು ಚಿತ್ರತಂಡದ ನಿರ್ದೇಶನ ಮೇರೆಗೆ ತೆರವುಗೊಳಿಸಲಾಗಿದೆ.
ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಅವರನ್ನು ಹೋಲುವ ಬಾಹುಬಲಿ ಮೇಣದ ಪ್ರತಿಮೆಯನ್ನು ಚಿತ್ರತಂಡದ ಅನುಮತಿ ಇಲ್ಲದೆ ನಿರ್ಮಾಣ ಮಾಡಲಾಗುತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸೋಮವಾರ ಕರೆ ಮಾಡಿದ ಬಾಹುಬಲಿ ಚಿತ್ರದ ನಿರ್ಮಾಪಕ ಶೋಬು ಯರ್ಲಗಡ್ಡ ಪ್ರತಿಮೆ ತೆರವಿಗೆ ನಿರ್ದೇಶ ನೀಡಿದರು. ಈ ಹಿನ್ನೆಲೆಯಲ್ಲಿ ಸೋಮವಾರ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ.
ಇತ್ತೀಚೆಗೆ ಮ್ಯೂಸಿಯಂಗೆ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಪ್ರತಿಮೆಯ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಶೇರ್ ಮಾಡಿದ್ದರು. ಇದನ್ನು ಗಮನಿಸಿದ ನಿರ್ಮಾಪಕ ಶೋಬು ಯರ್ಲಗಡ್ಡ ‘ಈ ಪ್ರತಿಮೆ ನಿರ್ಮಾಣಕ್ಕೆ ಅಧಿಕೃತವಾಗಿ ಪರವಾನಗಿ ಪಡೆದಿಲ್ಲ. ನಮ್ಮ ಗಮನಕ್ಕೆ ಬಾರದೆ ಹಾಗೂ ಅನುಮತಿ ಪಡೆಯದೆ ನಿರ್ಮಾಣ ಮಾಡಿರುವ ಪ್ರತಿಮೆಯನ್ನು ಕೂಡಲೇ ತೆರವುಗೊಳಿಸಬೇಕು. ಪ್ರತಿಮೆಗೆ ಬಳಸಿರುವ ಬಟ್ಟೆಯು ಗುಣಮಟ್ಟದಿಂದ ಕೂಡಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂಗೆ ಕರೆ ಮಾಡಿ ತಿಳಿಸಿದ್ದು ಮಾತ್ರವಲ್ಲದೆ ‘ಎಕ್ಸ್’ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
‘ಬಾಹುಬಲಿ ಚಿತ್ರದ ನಿರ್ಮಾಪಕರು ಕರೆ ಮಾಡಿ ಪ್ರತಿಮೆ ತೆರವುಗೊಳಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬಾಹುಬಲಿ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಪಡೆದಿಲ್ಲ ಹಾಗೂ ಬಟ್ಟೆ ಗುಣಮಟ್ಟದಿಂದ ಕೂಡಿಲ್ಲ ಎಂಬ ಆಕ್ಷೇಪವನ್ನು ನಿರ್ಮಾಪಕರು ನಮ್ಮ ಬಳಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರತಿಮೆ ತೆರವುಗೊಳಿಸಿದ್ದೇವೆ’ ಎಂದು ಮ್ಯೂಸಿಯಂ ಸಿಬ್ಬಂದಿ ‘ವಿಜಯವಾಣಿ’ಗೆ ತಿಳಿಸಿದರು.
ಈ ಮ್ಯೂಸಿಯಂನಲ್ಲಿ ವರನಟ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ತಮಿಳುನಟ ರಜನಿಕಾಂತ್, ಮಹಾತ್ಮಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸೇರಿದಂತೆ ಹಲವಾರು ಗಣ್ಯ ವ್ಯಕ್ತಿಗಳ ಪ್ರತಿಮೆಗಳು ಇವೆ.