ಸನ್ಮಾನ ಸಮಾರಂಭ

29 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ಅಂಧರ ಕ್ರಿಕೆಟ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದ ತಂಡ ಪ್ರತಿನಿಧಿಸಿದ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಶಿಶುವಿನಹಾಳ ಗ್ರಾಮದ ಗಂಗವ್ವ ನೀಲಪ್ಪ ಹರಿಜನಗೆ ಧಾರವಾಡ ವಿಮೋಚನೆ ಸಂಘಟನೆ ವತಿಯಿಂದ ಅ. 1ರಂದು ಬೆಳಗ್ಗೆ 11.30ಕ್ಕೆ ಇಲ್ಲಿನ ನೌಕರರ ಭವನದಲ್ಲಿ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘಟನೆ ಕಾರ್ಯದರ್ಶಿ ಶಿವಣ್ಣ ಚಿಕ್ಕಣ್ಣವರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿಗಳಾಗಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಶಿವಪುತ್ರಪ್ಪ ಹೊಸಮನಿ, ಸಹಾಯಕ ನಿರ್ದೇಶಕ ಎನ್.ಎಂ. ಭೀಮಪ್ಪ, ನೋಂದಣಿ ಮತ್ತು ಮುಂದ್ರಾಕ ಇಲಾಖೆ ನಿವೃತ್ತ ನಿರ್ದೇಶಕ ಗುರುದೇವ ಕಳ್ಳಿಮನಿ, ರೇಷ್ಮೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ವೆಂಕಪ್ಪ, ಡಿ.ಎಸ್. ಕಾಲವಾಡ, ಕವಿವಿ ನಿವೃತ್ತ ಕುಲಸಚಿವ ಜಿ.ಬಿ ನಂದನ, ಎಸ್.ಬಿ. ಹೊಸಳ್ಳಿ, ಎಸ್.ಎನ್. ಬಿದರಳ್ಳಿ ಭಾಗವಹಿಸುವರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಶಿವಸೋಮಣ್ಣ ನಿಟ್ಟೂರ ಮಾತನಾಡಿ, ಮಹಿಳಾ ಅಂಧರ ಕ್ರಿಕೆಟ್ ತಂಡದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಗೆಲುವು ಸಾಧಿಸಿದ ತಂಡವು ಭಾರತಕ್ಕೆ ಬಂದಾಗ ಆಯಾ ರಾಜ್ಯಗಳ ಆಟಗಾರರನ್ನು ರಾಜ್ಯ ಸರ್ಕಾರಗಳು ನಗದು ಪುರಸ್ಕಾರ ನೀಡಿ ಗೌರವಿಸಿತ್ತು. ಗಂಗವ್ವ ಹರಿಜನಗೂ 25 ಲಕ್ಷ ರೂ. ನಗದು ಪುರಸ್ಕಾರ ನೀಡಬೇಕು. ಸರ್ಕಾರಿ ನೌಕರಿ ನೀಡಬೇಕು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net