

ಕೊಳ್ಳೇಗಾಲ: ಕಾಡಿಗೆ ಸೇರಿದ ಜಾಗವೆಂದು ತಾಲೂಕಿನ ಅರೇಪಾಳ್ಯದ ಇತಿಹಾಸ ಪ್ರಸಿದ್ಧ ಶ್ರೀ ಮಹದೇಶ್ವರ ದೇವಸ್ಥಾನದ ಸುತ್ತಲೂ ಅರಣ್ಯ ಅಧಿಕಾರಿಗಳು ಮಂಗಳವಾರ ಟ್ರಂಚ್ ಹೊಡಿಸಿದ್ದು, ಇದನ್ನು ಖಂಡಿಸಿ ಭಕ್ತರು ಪ್ರತಿಭಟಿಸಿದ ಬಳಿಕ ಹಳ್ಳಕ್ಕೆ ಅಧಿಕಾರಿಗಳೇ ಮಣ್ಣು ಮುಚ್ಚಿದ್ದಾರೆ.
ಅರಣ್ಯಾಧಿಕಾರಿಗಳು ಅರಣ್ಯ ಪ್ರದೇಶವೆಂದು ದೇವಾಲಯ ಸುತ್ತಲೂ ಟ್ರಂಚ್ ಹೊಡೆದಿದ್ದರು. ಮಾಹಿತಿ ತಿಳಿದ ಸುತ್ತಮುತ್ತಲ ಗ್ರಾಮಗಳ ಭಕ್ತರು ಟ್ರಂಚ್ ತೆಗೆದರೆ ಒಳಗೆ ಹೋಗಲು ಹೇಗೆ ಸಾಧ್ಯ? ಎಂದು ಅಳಲು ತೊಡಿಕೊಂಡಿದ್ದಾರೆ. ನಂತರ, ಈ ವಿಚಾರವನ್ನು ದೂರವಾಣಿ ಕರೆ ಮೂಲಕ ಪ್ರತಿಭಟನಕಾರರು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ತಿಳಿಸಿದ್ದು. ಈ ವೇಳೆ ಡಿಸಿಎಫ್ ಅವರೊಂದಿಗೆ ಚರ್ಚಿಸುವ ತನಕ ಕೆಲಸ ಮಾಡದಿರಲು ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು. ಆದರೂ ಅರಣ್ಯ ಅಧಿಕಾರಿಗಳು ಕೆಲಸವನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಭಕ್ತರ ಗುಂಪು ಪ್ರತಿಭಟನೆ ನಡೆಸಿದೆ. ಆ ನಂತರ, ವಿಧಿಯಿಲ್ಲದೆ ಆರ್‌ಎಫ್‌ಒ ವಾಸು, ಫಾರೆಸ್ಟರ್ ಅನಂತರಾಮು ತೆಗಿದಿದ್ದ ಗುಂಡಿಯನ್ನು ಅವರೇ ಮುಚ್ಚಿ ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದಾರೆ.
ಈ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಉಪಾಧ್ಯಕ್ಷ ತಿಮ್ಮರಾಜೀಪುರ ರಾಜು ಮಾತನಾಡಿ, ಈ ದೇವಾಲಯ ಇತಿಹಾಸ ಪ್ರಸಿದ್ಧವಾಗಿದೆ. ಗ್ರಾ.ಪಂ ಕಡೆಯಿಂದ ನೀರಿನ ವ್ಯವಸ್ಥೆ ಇನ್ನಿತರ ಸೌಕರ್ಯ ಕಲ್ಪಿಸಲಾಗಿದೆ. ದೇವಾಲಯ ಸುತ್ತಲೂ ಗುಂಡಿ ತೆಗೆದರೆ ಭಕ್ತರು ಪ್ರವೇಶ ಹೇಗೆ ಮಾಡುವುದು. ಅಲ್ಲದೆ, ಕಾಡಿನ ಹಂಚಿನಲ್ಲಿರುವುದರಿಂದ ಅರಣ್ಯಕ್ಕೆ ಯಾವುಧೇ ತೊಂದರೆಯಿಲ್ಲ ಎಂದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಕೆಂಪನಪಾಳ್ಯ ಮಹೇಶ್, ತಾಪಂ ಮಾಜಿ ಸದಸ್ಯ ಮರಿಸ್ವಾಮಿ, ಅಪ್ಪು ಟೀಂ ರಾಜೇಶ್, ಅರೇಪಾಳ್ಯ ಗ್ರಾಮದ ಸೋಮಣ್ಣ, ರುದ್ರೇಗೌಡ, ನಾಗರಾಜು, ಕಾಳೇಗೌಡ್ರು ಸೇರಿದಂತೆ ಇತರರು ಇದ್ದರು.