

ಯಳಂದೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾತ್ರಿ ಮೈಸೂರಿನ ನಿರಂತರ ಕಲಾ ವೇದಿಕೆಯ ಜಗ್ಗು ಜಾದೂಗಾರ, ಮಿಮಿಕ್ರಿ ಕಲಾವಿದ ರವಿಕುಮಾರ್ ನಡೆಸಿಕೊಟ್ಟ ಮ್ಯಾಜಿಕ್ ಶೋ ಹಾಗೂ ಮಿಮಿಕ್ರಿ ಕಾರ್ಯಕ್ರಮ ನಂತರ ನಡೆದ ಹನೂರು ಚೆನ್ನಪ್ಪ ವಿರಚಿತ ಬೆಲ್ಲದ ದೋಣಿ ನಾಟಕದ 18ನೇ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯಿತು.
ಬೆಲ್ಲದ ದೋಣಿ ನಾಟಕ ಪ್ರದರ್ಶನಕ್ಕೂ ಮುಂಚೆ ನಡೆದ ಸಮಾರಂಭದಲ್ಲಿ ಹಿರಿಯ ರಂಗಕರ್ಮಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕ ಕಲಾವಿದ ಸಂತೇಮರಹಳ್ಳಿ ಎಂ.ಪಿ.ರಾಜು ಅವರನ್ನು ಸನ್ಮಾನಿಸಲಾಯಿತು.
ಸಾಹಿತಿ ಹನೂರು ಚನ್ನಪ್ಪ ಮಾತನಾಡಿ, ನಮ್ಮ ಜಿಲ್ಲೆ ಜಾನಪದ, ಕಲಾವಿದ ತವರಾಗಿದೆ. ಇಲ್ಲಿ ಕಲಾವಿದರಿಗೆ ಕೊರತೆ ಇಲ್ಲ. ನಾನು ರಚಿಸಿರುವ ‘ಬೆಲ್ಲದ ದೋಣಿ’ ನಾಟಕ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ 18ನೇ ಪ್ರದರ್ಶನ ಕಾಣುತ್ತಿರುವುದು ಖುಷಿಯಾಗಿದೆ. ಇದಕ್ಕೆ ಕಾರಣರಾದ ನಾಟಕ ನಿರ್ದೇಶಕರು, ಕಲಾವಿದರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಹಿರಿಯ ರಂಗಕರ್ಮಿ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಬೆಲ್ಲದ ದೋಣಿ ನಾಟಕ ಒಂದು ಉತ್ತಮ ಕಥಾ ಹಂದರವನ್ನು ಹೊಂದಿದೆ. ನಮ್ಮ ಜಿಲ್ಲೆ ಡಾ. ರಾಜ್‌ಕುಮಾರ್, ಸಿಂಗನಲ್ಲೂರು ಪುಟ್ಟಸ್ವಾಮಯ್ಯ, ಸುಂದರ್ ಕೃಷ್ಣ ಅರಸ್ ಅವರಂತಹ ಮೇರು ಕಲಾವಿದರನ್ನು ನೀಡಿದ ಹೆಮ್ಮೆಯ ಜಿಲ್ಲೆಯಾಗಿದೆ. ಇಲ್ಲಿ ಕಲಾವಿದರಿಗೆ ಬರವಿಲ್ಲ. ಬೆಲ್ಲದ ದೋಣಿ ನಾಟಕವನ್ನು ನಮ್ಮ ಕಲಾವಿದರು ಅತ್ಯುತ್ತಮ ನಟನೆಯೊಂದಿಗೆ ಜನಮನ್ನಣೆಯನ್ನು ಗಳಿಸಿದ್ದಾರೆ. ಮಂಡ್ಯ ರಮೇಶ್ ಅವರ ನಟನ ರಂಗಮಂದಿರದಲ್ಲಿ ನಮ್ಮ ನಾಟಕವನ್ನು ಮಾಡಲು ಆಹ್ವಾನವಿದ್ದು, ಇದು ನಮಗೆ ಹೆಮ್ಮೆಯ ವಿಷಯವಾಗಿದೆ. ಜಗ್ಗು ಜಾದೂಗಾರ್ ಅವರು ತಮಗೆ ದೃಷ್ಟಿ ದೋಷವಿದ್ದರೂ ಕೂಡ ಕಲೆಯನ್ನೇ ತಮ್ಮ ಜೀವನವಾಗಿಸಿಕೊಂಡಿದ್ದಾರೆ. ಇವರು ನೂರಾರು ಪ್ರದರ್ಶನಗಳನ್ನು ನೀಡಿದ್ದಾರೆ. ಇಂತಹ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ, ನಿರಂಜನಸ್ವಾಮಿ, ರಂಗ ದೇಗುಲದ ಕಲಾವಿದ ಶಾಂತರಾಜು, ಬಸವರಾಜಪ್ಪ, ಪುಟ್ಟಸುಬ್ಬಪ್ಪ, ಕಲೆನಟರಾಜು, ಮಾಂಬಳ್ಳಿ ಅರುಣ್‌ಕುಮಾರ್, ಪ್ರಕಾಶ್ ಸೇರಿದಂತೆ ಅನೇಕರು ಇದ್ದರು.