ಪುಲಿಗೆರೆ ಉತ್ಸವದ ಕೊನೆಯ ದಿನವೂ ಪ್ರೇಕ್ಷಕರು ಪಿಧಾ

24 LXR 1
Published on

ಲಕ್ಷ್ಮೇಶ್ವರ: ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪುಲಿಗೆರೆ ಉತ್ಸವದ ಕೊನೆಯ ದಿನವಾದ ಭಾನುವಾರ ಬೆಂಗಳೂರಿನ ರೋಹಿಣಿ ಮತ್ತು ಮೇಧಾ ಅವರ ಭರತನಾಟ್ಯಮತ್ತು ಕಥಕ್ ಮನಸೂರೆಗೊಂಡಿತು.

ನಾಟ್ಯದ ವೈಭವ ಒಗ್ಗೂಡಿಸುವ ಮನೋಹರ ನೃತ್ಯ ರಚನೆಯನ್ನು ಕಲಾವಿದೆಯರು 1 ತಾಸು ಮನಮೋಹಕವಾಗಿ ಪ್ರಸ್ತುತಪಡಿಸಿದರು. ಭರತನಾಟ್ಯ ಮತ್ತು ಕಥಕ್ ಪ್ರೇಕ್ಷಕರ ಮನಸಿನಲ್ಲಿ ಅಚ್ಚೊತ್ತಿದಂತಿತ್ತು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗುರುಗಳು ಸ್ಮತಿ ನಿರೂಪಮಾ ರಾಜೇಂದ್ರ ಮತ್ತು ಡಿ. ರಾಜೇಂದ್ರ ಅವರ ಶಿಷ್ಯರಾಗಿ ಹೆಸರು ಗಳಿಸಿರುವ ಅಂತಾರಾಷ್ಟ್ರೀಯ ಕಲಾವಿದೆಯರಾದ ರೋಹಿಣಿ ಪ್ರಭಾತ್(ಕಥಕ್) ಮತ್ತು ಮೇಧಾವಿನಿ ವರಖೇಡಿ (ಭಾರತನಾಟ್ಯ) ನೃತ್ಯ ಪ್ರದರ್ಶಿಸಿದರು. ಪ್ರವೀಣ ಡಿ. ರಾವ್, ಪ್ರವೀಣ ಗೋಡ್ಖಿಂಡಿ ಅವರ ಸಂಗೀತದಲ್ಲಿ ‘ವಂದೇ ಹರಿಹರೌ ಶಿವ- ನಾರಾಯಣರ ತತ್ವಾತ್ಮಕ’ ಏಕತೆಯನ್ನು ಹೊಳಪಿಸುವ ಮಂಗಳಾಚರಣ ಪ್ರದರ್ಶಿಸಿದರು. ನಂತರ ‘ತರಳ ರನ್ನೆ ಲಕ್ಷ್ಮೀ-ಪಾರ್ವತಿ’ಯ ಹಾಸ್ಯಭರಿತ ಸಂಭಾಷಣೆಯ ಮೂಲಕ ಶಿವ-ವಿಷ್ಣು ಮಹಿಮೆಯನ್ನು ವ್ಯಕ್ತಪಡಿಸುವ ನೃತ್ಯವನ್ನು ಮನಮೋಹಕವಾಗಿ ಹಾಗೂ ಲೀಲಾಜಾಲವಾಗಿ ಅಭಿನಯಿಸಿ ಜನರಿಗೆ ಕಥಾನಕ ಅರ್ಥೈಸಿದರು. ನಂತರ ನೃತ್ಯದಲ್ಲಿ ಇಬ್ಬರ ಭಾವಗಳು ವಿಶೇಷವಾಗಿ ಕಂಡುಬಂದವು. ಒಬ್ಬಳು ಬಾಲಕೃಷ್ಣನೊಂದಿಗೆ ವಾತ್ಸಲ್ಯಭಾವ, ಇನ್ನೊಬ್ಬಳು ಶೃಂಗಾರ ಭಾವದಲ್ಲಿ ಕೃಷ್ಣ್ಣನನ್ನು ಆಕರ್ಷಿಸಿಸುವ ಕೃಷ್ಣ ನೀ ಬೇಗನೆ ಬಾರೋ ನೃತ್ಯದ ಜುಗಲ್‌ಬಂದಿ. ನೃತ್ಯ ಮುಕ್ತಾಯಗೊಂಡಾಗ ಇಡಿ ಸಭಾಂಗಣವೇ ಎದ್ದು ನಿಂತು ಕಲಾವಿದರ ಚಪ್ಪಾಳೆಯ ಮಳೆ ಸುರಿಸಿತು. ನಿರಂತರವಾಗಿ ನೃತ್ಯ ಪ್ರದರ್ಶಿಸಿದ ಕಲಾವಿದೆಯರು ಪ್ರೇಕ್ಷಕರ ಕರತಾಡನದಿಂದ ಪುಳಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net