

ಕೊಳ್ಳೇಗಾಲ: ಪಟ್ಟಣದ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಶನಿವಾರ ಎಚ್.ಕೃಷ್ಣಸ್ವಾಮಿ ಮೆಮೊರಿಯಲ್ ಟ್ರಸ್ಟ್ ಹಾಗೂ ರೋಟರಿ ಮಿಡ್ ಟೌನ್ ವತಿಯಿಂದ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಪ್ರಯುಕ್ತ ಆರಕ್ಷಕರಿಗೆ ನಮನ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಅವರ ಸಾರಥ್ಯದಲ್ಲಿ ಹೊರಹೊಮ್ಮಿದ ಗೀತೆಗಳಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಿನ್ನೆಲೆ ಗಾಯಕರಾದ ಅನುರಾಧಾ ಭಟ್, ಇಂದೂ ನಾಗರಾಜು, ಜಸ್ಕರನ್ ಸಿಂಗ್, ಸುನೀಲ್ ಗುಜಗೊಂಡ, ವ್ಯಾಸರಾಜ್ ಸೇರಿದಂತೆ ಇನ್ನಿತರ ಗಾಯಕರ ಕನ್ನಡ ಹಾಡುಗಳ ಮೋಡಿಗೆ ಪ್ರೇಕ್ಷಕರು ಫಿದಾ ಆದರು. ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರಿಗೆ ಪಾಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿದ ಜನರು ಆಗಮಿಸಿದ್ದರಿಂದ ಪಾಸ್ ಗಳಿದ್ದರೂ ಸೀಟ್ ಸಿಗದೆ ನೂರಾರು ಜನರು ಕಾರ್ಯಕ್ರಮವನ್ನು ನಿಂತುಕೊಂಡೇ ವೀಕ್ಷಿಸಿದರು. ಜನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಟ್ಟರು.
ಶಾಂತಿ, ಸಮೃದ್ಧಿ, ಸುರಕ್ಷಿತ: ನಮ್ಮೂರ ಕನ್ನಡ ಹಬ್ಬ ಅಂಗವಾಗಿ ಆರಕ್ಷಕರಿಗೆ ನಮನ ಹಾಗೂ ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಆರಕ್ಷಕರು, ಸೈನಿಕರು ಹಾಗೂ ರೈತರಿಂದ ದೇಶ ಶಾಂತಿ, ಸಮೃದ್ಧಿ ಹಾಗೂ ಸುರಕ್ಷಿತವಾಗಿದೆ. ರಾಜ್ಯೋತ್ಸವ ಸಂಭ್ರಮದಲ್ಲಿ ಆರಕ್ಷಕರಿಗೆ ನಮನ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಸಮಾಜಮುಖಿ ಕಾರ್ಯಗಳನ್ನು ಮಾಡುವ ಜತೆಗೆ ಇಂತಹ ಅರ್ಥ ಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವ ಎಚ್.ಕೆ.ಟ್ರಸ್ಟ್ ಹಾಗೂ ರೋಟರಿ ಮಿಡ್ ಟೌನ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರ‌್ಯಾಂಪ್ ವಾಕ್: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ಮತ್ತು ಅವರ ಪತ್ನಿ ಮಂಜುಳಾ ಕೃಷ್ಣಮೂರ್ತಿ ಅವರು ವೇದಿಕೆಯಲ್ಲಿ ಕೈ ಹಿಡಿದು ರ‌್ಯಾಂಪ್ ವಾಕ್ ಮಾಡಿದರು. ಈ ವೇಳೆ ವೇದಿಕೆ ಮುಂದಿದ್ದ ಜನರು ಹರ್ಷೋದ್ಘಾರ ಮೊಳ ಗಿಸಿದರು. ಬಳಿಕ ಶಾಸಕ ಎ.ಆರ್.ಕೃಷ್ಣ ಮೂರ್ತಿ ಮಾತನಾಡಿ, ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ತಂಡದ ಹಾಡಿಗೆ ಕೊಳ್ಳೇಗಾಲ ಜನ ಕುಣಿದು, ಕುಪ್ಪಳಿಸಿ ಆನಂದಿಸಿದ್ದಾರೆ. ಎಚ್.ಕೆ.ಮಹಾನಂದ್, ಪ್ರವೀಣ್, ಹರ್ಷ ಹಾಗೂ ಸ್ನೇಹಿತರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಪೊಲೀಸರಿಗೆ ಸನ್ಮಾನ: ಕೊಳ್ಳೇಗಾಲ ಉಪವಿಭಾಗ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ಎಚ್.ಕೆ.ಟ್ರಸ್ಟ್‌ನ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್‌ಕುಮಾರ್, ಬೆಂಗಳೂರಿನ ಡಿಸಿಆರ್‌ಇ ಡಿವೈಎಸ್ಪಿ ಎಚ್.ಕೆ.ಮಹಾನಂದ್, ರೋಟರಿ ಮಿಡ್‌ಟೌನ್ ಅಧ್ಯಕ್ಷ ಎಸ್.ಲೋಕೇಶ್, ಕಾರ್ಯದರ್ಶಿ ಎಂ.ಪ್ರಕಾಶ್, ಶಿವಾನಂದ್, ಪ್ರವೀಣ್, ನಟರಾಜ್, ಜೆ.ಹರ್ಷ ಮತ್ತಿತರರಿದ್ದರು.