‘ಕವಿಯ ನೋಡಿ, ಕವಿತೆ ಕೇಳಿ’ ಹಾಡಿನ ಮೋಡಿಗೆ ಭಾವ ಸಾಗರದಲ್ಲಿ ಮಿಂದೆದ್ದ ಪ್ರೇಕ್ಷಕರು

10
Published on

ಮೈಸೂರು: ಕವಿ ವಾಚಿಸಿದ ಕವಿತೆಗೆ ಧ್ವನಿಯಾದ ಗಾಯಕರ ಹಾಡಿನ ಮೋಡಿಗೆ ನೆರೆದಿದ್ದವರು ಭಾವ ಸಾಗರದಲ್ಲಿ ಮಿಂದೆದ್ದರು. ತಮ್ಮಿಚ್ಚೆಯ ಕವಿತೆಗಳನ್ನು ವಾಚಿಸಿದ ಕವಿಗಳ ಪದಗಳಿಗೆ ರಾಗಕೊಟ್ಟ ಗಾಯಕರು, ಮನಸೂರೆಗೊಂಡರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನಿಂದ ನಗರದ ಕಟ್ಟಡ ನಿರ್ಮಾಣಗಾರರ ಒಕ್ಕೂಟದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಕವಿಯ ನೋಡಿ, ಕವಿತೆ ಕೇಳಿ’ ಗಾನ ಗಾರುಡಿಗೆ ಮಾರು ಹೋದರು.
ಖ್ಯಾತ ಕವಿಗಳಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಜಯಪ್ಪ ಹೊನ್ನಾಳಿ ಅವರ ಹೆಸರಾಂತ ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಗಾಯನಕ್ಕೂ ಮುನ್ನು ಕವಿತೆ ಬರೆದ ಸಂದರ್ಭ, ಸನ್ನಿವೇಶ, ಕವಿತೆಗಳ ಭಾವಾರ್ಥವನ್ನು ಕವಿಗಳು ಸಭಿಕರೊಂದಿಗೆ ಹಂಚಿಕೊಂಡರು.
ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು, ‘ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರು ಅರಿತೆವೇನು ನಾವು ನಮ್ಮ ಅಂತರಾಳವ’ ಕವಿತೆ ರಚನೆಗೊಂಡಾಗ ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಪೇಪರ್, ಪೆನ್ನು ಏನು ಇಲ್ಲದಿದ್ದಾಗ ಬಸ್ ಕಂಡಕ್ಟರ್ ಬಳಿ ಪೆನ್ನು ಪಡೆದು ಟಿಕೆಟ್ ಹಿಂದೆಯೇ ಕವಿತೆ ಬರೆದು ಮುಗಿಸಿದ್ದನ್ನು ಮೆಲುಕು ಹಾಕಿದರು.
ಯಾವುದೇ ಕವಿತೆಗಳು ರಚನೆಗೊಂಡಾಗ ಅವು ಜನಪ್ರಿಯ ಆಗುವುದು, ರಾಗ ಸಂಯೋಜಿಸಿ ಸಂಗೀತ ನೀಡಿದಾಗ. ಅಂತಹ ಪ್ರಯತ್ನದಲ್ಲಿ ಸಾಕಷ್ಟು ಕವಿತೆಗಳು ಜನಪ್ರಿಯಗೊಂಡು ಎಲ್ಲರ ಬಾಯಲ್ಲಿ ನಲಿಯುತ್ತಿವೆ. ಇದಕ್ಕೆ ಕವಿತೆಗಳ ಭಾವ, ಗಾಯಕರ ಧ್ವನಿ ಎರಡೂ ಮುಖ್ಯ.‘ ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’ ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಿದಾಗ 65 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಲ್ಲದೇ ಎಲ್ಲ ಜನಪ್ರಿಯ ಗಾಯಕರು ಹಾಡಿರುವುದು ಅದರ ಜನಪ್ರಿಯತೆಗೆ ಸಾಕ್ಷಿ ಎಂದರು.
ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, ನಾನು ಲೌಖಿಕ ಹಾಗೂ ಲವ್ ಕಿಕ್ ಕವಿತೆಗಳನ್ನು ಬರೆದಿದ್ದು, ಎರಡನ್ನೂ ಕನ್ನಡ ಜನತೆ ಆಪ್ತತೆಯಿಂದ ಅಪ್ಪಿಕೊಂಡಿದ್ದಾರೆ ಎಂದು ತಮ್ಮದೇ ದಾಟಿಯಲ್ಲಿ ಹಾಸ್ಯಚಟಾಕಿ ಹಾರಿಸಿದರು.
‘ಅಮ್ಮ ನನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು’ ಕವಿತೆಯನ್ನು ಬಹುತೇಕ ಎಲ್ಲ ಗಾಯಕರು ಹಾಡಿದ್ದಾರೆ. ಹಾಗೆಯೇ ಅಕಾಶವಾಣಿ ಹಾಸ್ಯ ಕಾರ್ಯಕ್ರಮಕ್ಕಾಗಿ ಬರೆದ ಮಧ್ಯಮ ವರ್ಗದ ತೊಳಲಾಟವನ್ನು ಬಿಂಬಿಸುವ ‘ಬಾರೆ ರಾಜಕುಮಾರಿ ಹೋಗೋಣ ಜಂಬೂಸವಾರಿ’ ಗೀತೆಯನ್ನು ಮೆಚ್ಚಿಕೊಂಡು ಜನಪ್ರಿಯಗೊಳಿಸಿ ಬೆನ್ನುತಟ್ಟಿದ್ದಾರೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಸುಗಮ ಸಂಗೀತಕ್ಕೆ ಜನಪ್ರೀಯತೆ ಮುಗಿದು ಹೋಯಿತು ಎನ್ನುವ ಅಪವಾದವನ್ನು ಜನರು ತೊಡೆದು ಹಾಕುತ್ತಿದ್ದಾರೆ. ಸಾಕಷ್ಟು ಕವಿತೆಗಳನ್ನು ಗಾಯಕರು ಜನಪ್ರಿಯಗೊಳಿಸಿದ್ದಾರೆ. ಸುಗಮ ಸಂಗೀತಕ್ಕೆ ಒಂದು ಗರಿಮೆ ತಂದುಕೊಟ್ಟಿರುವ ಮೈಸೂರಿನಲ್ಲಿ ಮುಂದಿನ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ ಆಯೋಜಿಸಲಾಗುವುದು ಎಂದು ಘೋಷಿಸಿದರು.
ಹಿಂದೆ ಸುಗಮ ಸಂಗೀತವನ್ನು ಲಘು ಸಂಗೀತ ಎಂದು ಹೀಯಾಳಿಸಿದ್ದು, ಇದೆ. ಆದರೆ ಮೈಸೂರು ಅನಂತಸ್ವಾಮಿ, ಸಿ.ಅಶ್ವತ್ಥ್ ಸೇರಿ ದಂತೆ ಅನೇಕ ಗಾಯಕರು ಸುಗಮ ಸಂಗೀತ ಕ್ಷೇತ್ರಕ್ಕೆ ತನ್ನದೇ ಗಸ್ತು ಗಾಂಭೀರ್ಯ ಬರುವಂತೆ ಮಾಡಿದರು. ಪರಿಷತ್ತು ಆ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಎಲ್ಲ ಜಿಲ್ಲೆಯಲ್ಲಿಯೂ ಸುಗಮ ಸಂಗೀತ ಜನಪ್ರಿಯಗೊಳಿಸಲು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಂಗೀತ ವಿಶ್ವವಿದ್ಯಾಲಯದಲ್ಲಿ ಸುಗಮ ಸಂಗೀತವನ್ನು ಒಂದು ಪಠ್ಯವಾಗಿ ಸೇರಿಸಿ, ಅದಕ್ಕೆ ಪಠ್ಯ ಸಿದ್ಧಪಡಿಸಿಕೊಡಲಾಗುವುದು ಎಂದು ಎಷ್ಟು ಬಾರಿ ಹೇಳಿದರೂ ವಿಶ್ವವಿದ್ಯಾಲಯ ಆ ಬಗ್ಗೆ ತಲೆಕಡಿಸಿಕೊಂಡಿಲ್ಲ. ಇತ್ತೀಚೆಗೆ ನಡೆದ ಸಂಗೀತ ಪರೀಕ್ಷೆಗೆ ಒಂದು ಪೇಪರ್ ಕೊಡಲು ಸಹ ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜ್ ವಿ.ಬೈರಿ ಮಾತನಾಡಿ, ಪರಿಷತ್ತಿನಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ಸುಗಮ ಸಂಗೀತ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಮುಂದುವರಿಸಲಾಗುವುದು. ಅಲ್ಲದೆ ಆಗಾಗ್ಗೆ ಕವಿಗಳು ಹಾಗೂ ಗಾಯಕರನ್ನು ಒಟ್ಟಿಗೆ ಸೇರಿಸಿ ಕವಿಯ ನೋಡಿ, ಕವಿತೆ ಕೇಳಿ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net