ರಾಜಧಾನಿಯಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಆಕರ್ಷಣೆ

rss routemarch
Published on

ಬೆಂಗಳೂರು: ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಭಾನುವಾರ ನಗರದ ಹಲವೆಡೆ ಪಥಸಂಚಲವನ್ನು ಆಯೋಜಿಸಿತ್ತು. ಸಂಘದ ಶತಮಾನೋತ್ಸವ ವರ್ಷಾಚರಣೆ ಆಗಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಗಣವೇಷಧಾರಿ ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಕೆಲವೆಡೆ ಮಳೆಯಲ್ಲೂ ಪಥಸಂಚಲನ ನಡೆಯಿತು.

ಪಥಸಂಚಲನ ಸಾಗಿದ ಮಾರ್ಗಗಳಲ್ಲಿ ರಂಗೋಲಿ ಹಾಕಿ ಕೇಸರಿ ಧ್ವಜ, ಬಂಟಿಂಗ್ಸ್​​ಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಸಂಘದ ಹಿತೈಷಿಗಳ ಮಕ್ಕಳು ಮಹಾಪುರುಷರ ವೇಷ ಧರಿಸಿದ್ದು ಗಮನ ಸೆಳೆಯಿತು. ಪಥಸಂಚಲನ ಸಾಗಿದ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸಂಘದ ಬೆಂಬಲಿಗರು ಹಾಗೂ ಸಾರ್ವಜನಿಕರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಸಹಿತ ದೇಶಭಕ್ತಿಯ ಜಯೋಷವನ್ನು ಮೊಳಗಿಸಿದರು. ಘೋಷ್ ವಾದನಕ್ಕೆ ಸರಿಯಾಗಿ ಹೆಜ್ಜೆ ಹಾಕಿ ಸಾಗಿದ ಸ್ವಯಂಸೇವಕರ ಠೀವಿಯ ನಡೆ ನಾಗರಿಕರ ಮೆಚ್ಚುಗೆ ಗಳಿಸಿತು.

ಆರ್‌ಎಸ್‌ಎಸ್‌ನ ಬೆಂಗಳೂರು ದಕ್ಷಿಣ ಭಾಗಗಳಾದ ವಿಜಯನಗರ, ಶಂಕರಪುರ, ಬನಶಂಕರಿ, ಜಯನಗರ, ಚಂದಾಪುರ, ಮಾರತ್‌ಹಳ್ಳಿಯಲ್ಲಿ ಹೆಚ್ಚಿನ ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡರು. ಉತ್ತರ ಭಾಗಗಳಾದ ಯಲಹಂಕ, ಹಲಸೂರು, ಬಸವೇಶ್ವನಗರ, ಮಲ್ಲೇಶ್ವರ, ದಾಸರಹಳ್ಳಿ, ಕೆ.ಆರ್.ಪುರದಲ್ಲೂ ಪಥಸಂಚಲನ ನಡೆಯಿತು.

ಸಂಜೆ ಶ್ರೀರಾಮಪುರದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಮಹಿಳಾ ಸ್ವಯಂಸೇವಕಿಯರ ಪಥಸಂಚಲ ವಿಶೇಷ ಗಮನ ಸೆಳೆಯಿತು. ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಶಂಕರಪುರ ಭಾಗದ ಪಥಸಂಚಲನದಲ್ಲಿ ಪ್ರತಿಪಕ್ಷ ನಾಯಕ ಆರ್.ಆಶೋಕ್, ಸಂಸದ ತೇಜಸ್ವಿ ಸೂರ್ಯ, ಮಲ್ಲೇಶ್ವರ ಭಾಗದ ಪಥಸಂಚಲನದಲ್ಲಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಪಾಲ್ಗೊಂಡಿದ್ದರು. ಸಂಘದ ಹಿರಿಯ ಪ್ರಮುಖರು ಕೂಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net