ಕನ್ನಡದಲ್ಲಿ ಕಲಿಯುವಂತಹದ್ದು ಏನಿದೆ ಎಂಬ ಮನೋಭಾವನೆ ಬದಲಾಗಲಿ : ಪ್ರೊ. ಓ.ಎಲ್. ನಾಗಭೂಷಣಸ್ವಾಮಿ

vijya vittala college
Published on

ಮೈಸೂರು: ಕನ್ನಡ ಪಾಠ ಮಾಡುವುದು ಅನಗತ್ಯ ಎಂಬ ಮನೋಭಾವವನ್ನು ಕೆಲವು ವಿದ್ಯಾಸಂಸ್ಥೆಗಳೇ ಹೊಂದಿವೆ ಎಂದು ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ (ಪದವಿಪೂರ್ವ ಶಿಕ್ಷಣ) ಇಲಾಖೆ, ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ನಗರದ ಸರಸ್ವತಿಪುರಂನ ವಿಜಯ ವಿಠ್ಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ‘ಪಿಯುಸಿ ಹಂತದಲ್ಲಿ ಕನ್ನಡ ಭಾಷಾ ಪಠ್ಯ ಬೋಧನೆ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡದಲ್ಲಿ ಕಲಿಯುವಂತಹದ್ದು ಏನಿದೆ ಎಂಬ ಮನೋಭಾವವನ್ನು ಹಲವರು ಹೊಂದಿದ್ದಾರೆ. ಹೀಗಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಭಾಷೆಯ ಕಲಿಕೆಗೆ ಮಹತ್ವದ ಸ್ಥಾನ ನೀಡದೆ ಕೇವಲ ಅಂಕಗಳಿಕೆಗೆ ಮಾತ್ರ ಒತ್ತು ನೀಡಲಾಗುತ್ತಿದ್ದು, ಈ ವ್ಯವಸ್ಥೆ ಬದಲಾಗಬೇಕಾಗಿದೆ. ಕನ್ನಡ ತರಗತಿಯಲ್ಲಿ ಏನೋ ಸಿಗುತ್ತದೆ ಎಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಜವಾಬ್ದಾರಿ ಕನ್ನಡ ಉಪನ್ಯಾಸಕರ ಮೇಲಿದೆ ಎಂದು ಹೇಳಿದರು.

ಉಪನ್ಯಾಸಕರು ಹೊಸ ವಿಚಾರಗಳಿಗೆ ತಮ್ಮನ್ನು ತೆರೆದುಕೊಳ್ಳಬೇಕು. ಹೊಸ ವಿಚಾರಗಳನ್ನು ತಿಳಿದುಕೊಳ್ಳದೆ ಹೋದರೆ ವಿದ್ಯಾರ್ಥಿಗಳಿಗೆ ಹೊಸತನ್ನು ಹೇಳಿಕೊಡಲು ಸಾಧ್ಯವಿಲ್ಲ. ಈಗಿನ ತಲೆಮಾರಿನ ವಿದ್ಯಾರ್ಥಿಗಳು ನಮಗಿಂತ 100 ಪಟ್ಟು ಹೆಚ್ಚು ಬುದ್ಧಿವಂತರು ಇರುತ್ತಾರೆ ಎಂಬ ಅಂಶ ಉಪನ್ಯಾಸಕರ ಗಮನದಲ್ಲಿ ಇರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಉಪ ನಿರ್ದೇಶಕ ಎಂ. ಮರಿಸ್ವಾಮಿ, ಕಾಲೇಜು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಡಾ.ನೀ.ಗೂ. ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net