

ಮುಂಡಗೋಡ: ಬೆಳಗ್ಗೆಯಿಂದ ರಾತ್ರಿಯವರೆಗೂ ಪಟ್ಟಣದ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ವಿುಕರಿಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈವರೆಗೂ ಮಳೆಗಾಲದಲ್ಲಿನ ಸುರಕ್ಷಾ ಪರಿಕರಗಳನ್ನು ವಿತರಿಸಿಲ್ಲ. ಇದರಿಂದಾಗಿ ಪೌರ ಕಾರ್ವಿುಕರು ಮಳೆಯಲ್ಲಿಯೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಬಂದಿದೆ.
ಪಟ್ಟಣ ಸ್ವಚ್ಛ ಮತ್ತು ಸುಂದರವಾಗಿ ಕಾಣಲು ಪೌರ ಕಾರ್ವಿುಕರ ಪರಿಶ್ರಮವೇ ಕಾರಣ. ಅವರು ಸ್ವಚ್ಛತಾ ಕಾರ್ಯ ಕೈಗೊಳ್ಳದಿದ್ದರೆ ಪಟ್ಟಣಕ್ಕೆ ಪಟ್ಟಣವೇ ಗಬ್ಬೆದ್ದು ನಾರುತ್ತದೆ. ಸ್ವಚ್ಛತೆಗೆ ತಮ್ಮದೆಯಾದ ಕೊಡುಗೆ ನೀಡುವ ಪೌರ ಕಾರ್ವಿುಕರನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸುರಕ್ಷಾ ಸಾಮಗ್ರಿಗಳಿಲ್ಲ: ಮಳೆಗಾಲ ಆರಂಭವಾದರೆ ಎಲ್ಲ ಪೌರ ಕಾರ್ವಿುಕರಿಗೆ ರೇನ್ಕೋಟ್, ಗಂಬೂಟ್, ಕೈಕವಚ, ಮಾಸ್ಕ್ಗಳನ್ನು ಕಡ್ಡಾಯವಾಗಿ ನೀಡಬೇಕು. ಆದರೆ, ಈ ವರ್ಷ ಮಳೆಗಾಲ ಆರಂಭವಾಗಿ ತಿಂಗಳಾದರೂ ಪಪಂ ಅಧಿಕಾರಿಗಳು ಪೌರ ಕಾರ್ವಿುಕರಿಗೆ ರಕ್ಷಾ ಪರಿಕರಗಳನ್ನು ವಿತರಿಸಿಲ್ಲ. ಕಳೆದ ವರ್ಷ ನೀಡಿದ್ದ ರೇನ್ಕೋಟ್, ಬೂಟ್, ಕೈ ಕವಚಗಳು ಹರಿದು ಹೋಗಿದ್ದು, ಅವುಗಳನ್ನೇ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ಪಪಂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ದೂರು ಸಾರ್ವಜನಿಕರದಾಗಿದೆ.
ಪಟ್ಟಣದಲ್ಲಿ 16 ವಾರ್ಡ್ಗಳಿದ್ದು, ಎಲ್ಲ ವಾರ್ಡ್ಗಳ ಪೌರ ಕಾರ್ವಿುಕರಿಗೆ ಸುರಕ್ಷತಾ ಸಾಮಗ್ರಿಗಳನ್ನು ಮೊದಲು ಕೊಡಿಸುವ ಕೆಲಸವನ್ನು ಪಪಂ ಅಧಿಕಾರಿಗಳು ಮಾಡಬೇಕಿತ್ತು. ಆದರೆ, ಇದುವರೆಗೂ ವಿತರಿಸಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಿ ಪೌರ ಕಾರ್ವಿುಕರಿಗೆ ಮಳೆಗಾಲದ ಸುರಕ್ಷಾ ಸಾಮಗ್ರಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈ ಹಿಂದೆ ಚುನಾವಣೆಯಿದ್ದ ಕಾರಣ ಪೌರ ಕಾರ್ವಿುಕರ ಮಳೆಗಾಲದ ಸುರಕ್ಷಾ ಸಾಮಗ್ರಿಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ ಸದ್ಯದಲ್ಲಿಯೇ ಸುರಕ್ಷಾ ಸಾಮಗ್ರಿ ಖರೀದಿಸಿ ವಿತರಿಸಲಾಗುವುದು. | ಮಲ್ಲಯ್ಯ ಹಿರೇಮಠ ಮುಖ್ಯಾಧಿಕಾರಿ ಪಪಂ