

ಬೆಟ್ಟದಪುರ: ಪುಣ್ಯ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಕಿಡಿಗೇಡಿಗಳು ಎಷ್ಟೇ ಹುನ್ನಾರ ನಡೆಸಿ ಅಪಪ್ರಚಾರ ಮಾಡಿದರು ಸಹ ಯಾವುದೇ ರೀತಿಯಲ್ಲೂ ಫಲಿಸುವುದಿಲ್ಲ. ಯಾಕೆಂದರೆ ಅಲ್ಲಿ ನಾಡು ಕಾಯುವ ದೈವ ಮಂಜುನಾಥ ಇದ್ದಾನೆ ಎಂದು ಮಾಜಿ ಶಾಸಕ ಕೆ.ಮಹದೇವ್ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೊಡಗು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಕೂಡ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತನಾಗಿದ್ದು, ಕೆಲವು ದಿನಗಳ ಹಿಂದೆ ಪಕ್ಷದ ನಾಯಕರ ಜತೆ ಧರ್ಮಸ್ಥಳ ಯಾತ್ರೆ ಕೈಗೊಂಡು ಧರ್ಮದ ಪರವಾಗಿ ನಾವು ಇದ್ದೇವೆ ಎಂದು ಪೂಜ್ಯರಿಗೆ ತಿಳಿಸಿ ಬಂದಿದ್ದೇವೆ. ಹೆಗ್ಗಡೆ ಅವರು ಧರ್ಮಸ್ಥಳದ ಬಗ್ಗೆ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮಾನಸಿಕವಾಗಿ ನೋವು ಮಾಡಿಕೊಂಡಿದ್ದರು. ಅಂತಹ ಸಂದರ್ಭದಲ್ಲಿಯೂ ಈ ಯೋಜನೆಗಳ ಮುಖಾಂತರ ಭಕ್ತರ ಕಷ್ಟ ಸುಖಗಳಿಗೆ ನೆರವಾಗುತ್ತಿರುವುದು ಪ್ರಸಂಶನೀಯ ಎಂದರು.
ಗ್ರಾಮೀಣ ಭಾಗದ ಜನರು ಅದರಲ್ಲೂ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ರೈತರ ಬಗ್ಗೆ, ಶ್ರೀಸಾಮಾನ್ಯರ ಬಗ್ಗೆ ಸಂಸ್ಥೆಯು ಹೆಚ್ಚಿನ ಕಾಳಜಿ ವಹಿಸುತ್ತಿದೆ. ಅಲ್ಲದೆ ಗಾಂಧೀಜಿ ಆಶಯದಂತೆ ಪಾನಮುಕ್ತ ಗ್ರಾಮಗಳನ್ನಾಗಿ ಮಾಡಲು ಹೆಗ್ಗಡೆಯವರು ಮಧ್ಯವರ್ಜನ ಶಿಬಿರದ ಮೂಲಕ ಅವಿರತ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ದೇಶವು ಪ್ರಗತಿಯಾಗಬೇಕಾದರೆ ಗ್ರಾಮಗಳ ಪ್ರಗತಿ ಎಂಬುದು ಮಹಾತ್ಮ ಗಾಂಧೀಜಿ ಕಲ್ಪನೆ. ಅವರ ಆಶಯದಂತೆ ಗ್ರಾಮೀಣ ಭಾಗದ ಜನರು ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಹಲವು ಕಾರ್ಯಕ್ರಮ ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಹೈನುಗಾರಿಕೆಗೆ ಪ್ರೋತ್ಸಾಹ ಒದಗಿಸುವ ನಿಟ್ಟಿನಲಿ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಗ್ರಾಮೀಣ ಭಾಗದ ದೇವಸ್ಥಾನಗಳ ಮರುನಿರ್ಮಾಣಕ್ಕೆ ಧನ ಸಹಾಯ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುತ್ತಿದೆ ಎಂದರು.
ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷರಾದ ಲಕ್ಷ್ಮಿ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕೆ.ಸತೀಶ್ ಹೊನ್ನವಳ್ಳಿ, ವೇದಿಕೆಯ ಕೊಡಗು ಜಿಲ್ಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ಅಧ್ಯಕ್ಷ ಎ.ಟಿ.ರಂಗಸ್ವಾಮಿ, ಉಪಾಧ್ಯಕ್ಷ ಬಿ.ಜೆ.ದೇವರಾಜ್, ಯೋಜನೆಯ ನಿರ್ದೇಶಕಿ ಲೀಲಾವತಿ, ಸದಸ್ಯರಾದ ಎಚ್.ಡಿ ರಾಜೇಂದ್ರ, ಚೌಡೇಗೌಡ, ಯೋಜನಾಧಿಕಾರಿ ಸಂತೋಷ್ ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಮೇಲ್ವಿಚಾರಕಿ ಕೀರ್ತಿ ಇತರರು ಇದ್ದರು.