

ಹರಪನಹಳ್ಳಿ: ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ತಾಲೂಕು ಅಧ್ಯಕ್ಷ ಕೆ. ಸುಭಾಷ್ ಸೋಮವಾರ ಹೇಳಿದರು.
ತಾಲೂಕು ಆಡಳಿತ ಸೌಧದ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಘಟಕದಿಂದ ಎಸಿ ಚಿದಾನಂದ ಗುರುಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈ ದಾಳಿ ಕೇವಲ ವ್ಯಕ್ತಿಗತವಾಗಿ ನಡೆದ ದಾಳಿಯಲ್ಲ. ಸಂವಿಧಾನದ ಆತ್ಮದ ಮೇಲೆ ನಡೆದ ದಾಳಿಯಾಗಿದೆ. ದಲಿತ ನ್ಯಾಯಮೂರ್ತಿ ದೇಶದ ಅತ್ಯುನ್ನತ ಸ್ಥಾನ ಅಲಂಕರಿಸಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಜಾತಿ ಆಧಾರಿತ ಅಸಹನೆ, ದ್ವೇಷಪೂರಿತ ವಾತಾವರಣ ವಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ವಕೀಲ ಬಸವರಾಜ ಸಂಗಪ್ಪ ಮಾತನಾಡಿ, ಈ ಕೃತ್ಯ ಅಮಾನವೀಯವಾಗಿದೆ. ದೇಶದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೇವಲ ವಿರೋಧ ಪಕ್ಷಗಳು ಅಷ್ಟೇ ಇದನ್ನು ಖಂಡಿಸಿದರೆ ಸಾಲದು, ಆಡಳಿತಾರೂಢ ಪಕ್ಷವೂ ಇದನ್ನು ವಿರೋಧಿಸಬೇಕು ಎಂದರು.