ಕಲಾ ಪೋಷಣೆಯಲ್ಲಿ ಸಂಘದ ಕಾರ್ಯ ಸ್ಮರಣೀಯ

6 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಹಲವು ಕಲೆಗಳನ್ನು ಪ್ರೋತ್ಸಾಹಿಸುವ ಮತ್ತು ಪೋಷಿಸುವ ಕಾರ್ಯವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಮುಂದಾಳತ್ವದಲ್ಲಿ ಇಂದಿಗೂ ಮಾಡುತ್ತಾ ಬಂದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ್ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿರುವ ಹತ್ತು ದಿನಗಳ ನಾಟಕೋತ್ಸವಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕರ್ನಾಟಕ-50 ಸ್ಮರಣೆ ಸಂದರ್ಭದಲ್ಲಿ ಸರ್ಕಾರ ಮರೆತಿರುವುದು ವಿಷಾದದ ಸಂಗತಿ. ಈ ಸಂಸ್ಥೆಗೆ ಪ್ರಶಸ್ತಿ ನೀಡಿದ್ದರೂ ವಿಶೇಷ ಪ್ರಶಸ್ತಿಯೊಂದಿಗೆ ಗೌರವ ನೀಡುವ ಕಾರ್ಯ ಮಾಡದೆ ಇರುವ ತಪ್ಪನ್ನು ಸರಿಪಡಿಸಿ ಗೌರವ ನೀಡುವ ಮೂಲಕ ಸರ್ಕಾರ ತನ್ನ ಹಿರಿಮೆ ಹೆಚ್ಚಿಸಿಕೊಳ್ಳುವಂತಾಗಲಿ. ವೃತ್ತಿ ರಂಗಭೂಮಿ, ಕರ್ನಾಟಕ ಏಕೀಕರಣಕ್ಕೆ ಅಮೂಲ್ಯ ಕೊಡುಗೆ ನೀಡಿದ್ದನ್ನು ಯಾರೂ ಮರೆಯಬಾರದು ಎಂದರು.
ಡಾ. ರಾಮಕೃಷ್ಣ ಮರಾಠೆ ಮಾತನಾಡಿ, ಇಂದು ವೃತ್ತಿ ರಂಗಭೂಮಿಯು ಕಲಾವಿದರ ಕೊರತೆ ಅನುಭವಿಸುತ್ತಿದೆ. ಹಿಂದೆ ಕಲಾವಿದರಿದ್ದರೆ ಪ್ರೇಕ್ಷಕರ ಕೊರತೆ ಇತ್ತು. ಇಂದು ಪ್ರೇಕ್ಷಕರಿದ್ದಾರೆ, ಕಲಾವಿದರಿಲ್ಲ. ಹೊಸ ನಾಟಕಗಳಿಲ್ಲದೆ ಹಳೇ ನಾಟಕಗಳಲ್ಲೇ ವೃತ್ತಿ ರಂಗಭೂಮಿ ನಿಂತಿವೆ. ವೃತ್ತಿ ರಂಗಭೂಮಿಗೆ ಅಧ್ಯಯನ ತರಬೇತಿಗೆ ರಂಗಾಯಣ ಆರಂಭಿಸಿದರು. ಆದರೆ ಅದು ಮಾಡಬೇಕಾದ ಕೆಲಸ ಮಾಡಲಿಲ್ಲ ಎನ್ನುವುದು ನೋವಿನ ಸಂಗತಿ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಹಿರೇಹರಕುಣಿ ರಂಗಭೂಮಿ ಕಲಾವಿದ ಮಂಜುನಾಥಗೌಡ ಪಾಟೀಲ ಅವರಿಗೆ ಸನ್ಮಾನಿಸಲಾಯಿತು.
ಡಾ. ಧನವಂತ ಹಾಜವಗೋಳ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ಎಂ.ಎಂ. ಚಿಕ್ಕಮಠ, ಶಿವಾನಂದ ಭಾವಿಕಟ್ಟಿ, ಬಿ.ಜಿ. ಬಾರ್ಕಿ, ಮಹಾಂತೇಶ ನರೇಗಲ್, ಎಚ್.ಡಿ. ನದಾಫ್, ರಾಮಚಂದ್ರ ಧೋಂಗಡೆ, ಕೂಡಲಪ್ಪ ಮೆಣಸಿನಕಾಯಿ, ಇತರರು ಇದ್ದರು.
ಶಂಕರ ಹಲಗತ್ತಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಡಾ. ಮಹೇಶ ಹೊರಕೇರಿ ವಂದಿಸಿದರು. ಬಳಿಕ ಬಸವರಾಜ ಕರಿಮಲ್ಲಣ್ಣವರ ನಿರ್ದೇಶನದ ಲಂಕಾದಹನ ದೊಡ್ಡಾಟವನ್ನು ಹಿರೇಕುಣಿಯ ಬಸವೇಶ್ವರ ದೊಡ್ಡಾಟ ಸಂಘದ ಸದಸ್ಯರು ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net