

ಉಪ್ಪಿನಬೆಟಗೇರಿ: ಯಾವುದೇ ಸಂಘಗಳು ಬೆಳವಣಿಗೆ ಹೊಂದಲು, ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರ ಮುಖ್ಯವಾಗಿರುತ್ತದೆ ಎಂದು ಧಾರವಾಡ ಜಿಲ್ಲಾ ಕೋ ಆಪ್ ಸೊಸೈಟಿ ಅಧಿಕಾರಿ ಮಧುಸೂದನ ಪಿ. ಹೇಳಿದರು.
ಸ್ಥಳೀಯ ಹೊಸಪೇಟಿಮಠ ಓಣಿಯ ಹಜರತ್ ಕಮರೊದ್ದೀನ್ ದರ್ಗಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಎಪಿಜೆ ಅಬ್ದುಲ್ ಕಲಾಂ ಅಲ್ಪಸಂಖ್ಯಾತರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಸೊಸೈಟಿಯಲ್ಲಿ 280 ಬಡ ಜನರು ಸದಸ್ಯತ್ವ ಮಾಡಿಸಿಕೊಂಡಿದ್ದಾರೆ. ಸಂಘದಲ್ಲಿ ಉಳಿತಾಯ ಖಾತೆ, ಮುದ್ದತಿ ಠೇವು, ಯಶಸ್ವಿನಿ ಸೌಲಭ್ಯ, ಅಡಮಾನ, ವೈಯಕ್ತಿಕ ಸಾಲ, ವೇತನ ಆಧಾರಿತ ಸಾಲ ಅಲ್ಪ ಸಂಖ್ಯಾತರ ಇಲಾಖೆಯಿಂದ ದೊರೆಯುವ ಆರ್ಥಿಕ ಸೇವಾ ಸೌಲಭ್ಯಗಳು, ಹಿರಿಯರಿಗೆ ಠೇವಿನ ಮೇಲೆ ಅಧಿಕ ಬಡ್ಡಿ, ಪಿಗ್ಮಿ ಸಾಲ ಸೇರಿದಂತೆ ಹಲವಾರು ಸೌಲಭ್ಯಗಳು ದೊರೆಯಲಿವೆ ಎಂದರು.
ಸೊಸೈಟಿ ಅಧ್ಯಕ್ಷ ಅಬ್ದುಲ್ ಖಾದರ ದಡವಾಡ ಮಾತನಾಡಿ, ಸಂಘದ ಎಲ್ಲ ಸದಸ್ಯರು ಸಂಘದ ಜತೆಗೆ ಪಾರದರ್ಶಕ ವ್ಯವಹಾರ ಮಾಡಬೇಕು. ಸಾಲ ಪಡೆಯುವ ಪ್ರತಿಯೊಬ್ಬರೂ ಸಕಾಲಕ್ಕೆ ಮರುಪಾವತಿಸಿದರೆ, ಸಂಘದ ಜೊತೆಗೆ ಸದಸ್ಯರು ಆರ್ಥಿಕವಾಗಿ ಮುಂದೆ ಬರಬಹುದು ಎಂದರು.
ಗ್ರಾಪಂ ಅಧ್ಯಕ್ಷ ಬಸೀರಅಹ್ಮದ್ ಮಾಳಗಿಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ಉಪಾಧ್ಯಕ್ಷ ಮಕ್ತುಂಹುಸೇನ ಲಂಗೋಟಿ, ನಿರ್ದೇಶಕರಾದ ರಸೂಲಸಾಬ್ ಲಾಡಮ್ಮನವರ, ಇಮಾಮಹುಸೆನ ಮನ್ನಾಸಾಹೇಬ್, ಗೂಡುಸಾಬ್ ಮಕಾಂದಾರ, ಅಬ್ದುಲ್ಅಹ್ಮದ್ ಕರಡಿಗುಡ್ಡ, ಆಸೀಫ್ ನೇಗನಾಳ, ಇಬ್ರಾಹಿಂ ನೇಗನಾಳ, ಮಹಮ್ಮದ ರಫೀಕ್ ದಾಸ್ತಿಕೊಪ್ಪ, ಬಾಬಾಜಾನ್ ಲಾಲ್ಮಿಯಾ, ಝಾಕೀರಹುಸೇನ್ ಮುಲ್ಲಾ, ಹೀನಾ ಛಡೀದಾರ, ಉಮ್ಮೇಸದಫ್ ಪಾಟೀಲ, ಅಂಜುಮ್ ಸನದಿ ಸೇರಿದಂತೆ ಸೊಸೈಟಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಇಬ್ರಾಹಿಂ ಛಡೀದಾರ, ಇಮ್ರಾನ್ ಪಂಚ ಕಾರ್ಯಕ್ರಮ ನಿರ್ವಹಿಸಿದರು.