ಲೆಕ್ಕಾಚಾರ ಬುಡಮೇಲು ಮಾಡಿದ ವಿಧಾನಸಭಾ ಚುನಾವಣೆ

The assembly election that has upset the calculation
Published on

ಮಡಿಕೇರಿ:

ಸುಖ-ಕಷ್ಟಗಳ ಸಮಭಾವದ ಅನುಭವದೊಂದಿಗೆ ೨೦೨೩ನ್ನು ಬೀಳ್ಕೊಟ್ಟು ೨೦೨೪ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆಗಳು ನಡೆದಿರುವಂತೆಯೇ ಕಳೆದ ಹೋದ ಒಂದು ವರ್ಷದ ಮೆಲುಕು ಹಾಕುವಾಗ ಕೊಡಗಿನಲ್ಲೂ ವರ್ಷದ ಮೊದಲಾರ್ಧದಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು ಹೊರ ಬಿದ್ದ ಫಲಿತಾಂಶ ಪ್ರಮುಖ ಘಟನೆಯಾಗಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದ ಆರಂಭ ಅನ್ನಿಸಿಕೊಂಡಿರುವ ಜೂನ್‌ನಲ್ಲೂ ಬೇಸಿಗೆಯ ಅನುಭವ ಆಗಿದ್ದು ಈ ಬಾರಿಯ ವಿಶೇಷ. ವನ್ಯಜೀವಿ-ಮಾನವ ಸಂಘರ್ಷ ಪ್ರತಿ ಬಾರಿಯಂತೆ ಈ ವರ್ಷವೂ ಸಾಕಷ್ಟು ಕಹಿ ನೆನಪುಗಳನ್ನು ಉಳಿಸಿ ಹೋಗಲಿದೆ.

೨೦೨೩ ಚುನಾವಣಾ ವರ್ಷವಾಗಿಯೇ ಗುರುತಿಸಿಕೊಂಡು ಆರಂಭದ ದಿನಗಳಿಂದಲೇ ಬಿಸಿಯೇರಿಸಿಕೊಂಡಿತ್ತು. ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬಿಜೆಪಿ ದಶಕಗಳ ಕೊಡಗಿನ ಪಾರುಪತ್ಯೆಯನ್ನು ಈ ಚುನಾವಣೆಯಲ್ಲೂ ತಾನೇ ಮುಂದುವರಿಸಿಕೊಂಡು ಹೋಗುತ್ತೇನೆ ಎನ್ನುವ ಖಾತರಿಯಿಂದಲೇ ರಣಾಂಗಣಕ್ಕೆ ಇಳಿದಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಉತ್ಸಾಹಿ ಯುವ ಜೋಡಿ ಡಾ. ಮಂತರ್ ಗೌಡ ಮತ್ತು ಎ.ಎಸ್. ಪೊನ್ನಣ್ಣ ತಮಗೆ ಪ್ರಬಲ ಎದುರಾಳಿಗಳು ಎನ್ನುವುದನ್ನು ಬಿಜೆಪಿಯ ಘಟಾನುಘಟಿಗಳು ಮನಗಾಣಲು ಮೇ ೧೩ರ ಫಲಿತಾಂಶದ ದಿನದ ತನಕ ಕಾಯಬೇಕಾಯಿತು.

ಚುನಾವಣೆ ನೆಪದಲ್ಲಿ ಬಿಜೆಪಿಯಿಂದ ಗೃಹ ಸಚಿವ ಅಮಿತ್ ಶಾ, ಡಿ.ವಿ. ಸದಾನಂದ ಗೌಡ, ಆರ್. ಅಶೋಕ್ ಸೇರಿ ಘಟಾನುಘಟಿಗಳು ಕೊಡಗಿಗೆ ಆಗಮಿಸಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‌ದೀಪ್ ಸಿಂಗ್ ಸುರ್ಜಿವಾಲಾ ಪಕ್ಷದ ಮಹತ್ವಾಕಾಂಕ್ಷಿ ಗ್ಯಾರಂಟಿ ಕಾರ್ಡ್ ಮಡಿಕೇರಿಯಲ್ಲಿ ಬಿಡುಗಡೆ ಮಾಡಿದ್ದರು. ಮಧು ಬಂಗಾರಪ್ಪ ಸೇರಿದಂತೆ ಪ್ರಮುಖ ನಾಯಕರು ಆಗಮಿಸಿದ್ದರು. ಮುಖ್ಯಮಂತ್ರಿ ಆಗಿದ್ದ ಆರ್. ಗುಂಡೂರಾವ್ ಅವರನ್ನೇ ಸೊಲಿಸಿದ್ದ ಹೆಗ್ಗಳಿಕೆ ಬಿ.ಎ. ಜೀವಿಜಯ ಟಿಕೆಟ್ ಸಿಗದ ಕಾರಣಕ್ಕೆ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದರು.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷವನ್ನು ನಿವಾರಿಸಲು ಕೊಡಗು ವಿಭಾಗದ ಅರಣ್ಯ ಇಲಾಖೆ ಹೊಸ ತಂತ್ರಗಳನ್ನು ಪ್ರಯತ್ನಿಸುತ್ತಿದ್ದು, ಈ ವರ್ಷ ಆನೆ ಸಿಗ್ನಲ್ ಬೋರ್ಡ್ ಜನವರಿಯಲ್ಲಿ ಪರಿಚಯಿಸಲಾಗಿದೆ. ಆನೆಗಳ ಚಲನವಲನದ ಬಗ್ಗೆ ಈ ಬೋರ್ಡ್‌ನಲ್ಲಿ ಮಾಹಿತಿ ಕೊಡಲಾಗುತ್ತದೆ. ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಅತ್ತೂರು-ನಲ್ಲೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಮಂಪರು ಮದ್ದು ಪರಿಣಾಮದಿಂದ ೨೦ ವರ್ಷದ ಕಾಡಾನೆ ೩೫ ಅಡಿ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದೆ. ಫೆಬ್ರವರಿಯಲ್ಲಿ ದಕ್ಷಿಣ ಕೊಡಗಿನ ಕೆ. ಬಾಡಗ ಗ್ರಾಮದಲ್ಲಿ ಹುಲಿ ದಾಳಿಗೆ ಒಂದೇ ಕುಟುಂಬದ ೭೫ ವರ್ಷದ ಕಾರ್ಮಿಕ ರಾಜು ಮತ್ತು ಅವರ ಮೊಮ್ಮಗ ೧೮ ವರ್ಷದ ಚೇತನ್ ಬಲಿಯಾಗಿದ್ದರು. ನಂತರ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯಲಾಗಿತು. ಪಾಲಿಬೆಟ್ಟದ ಮಸ್ಕಲ್ ತೋಟದಲ್ಲಿ ಕಾಡಾನೆ ದಾಳಿಗೆ ೫೮ ವರ್ಷದ ಬಾಬಿ ಎಂಬ ಕಾರ್ಮಿಕ ಮೃತಪಟ್ಟ ಘಟನೆ ಮೇ ತಿಂಗಳಿನಲ್ಲಿ ನಡೆಯಿತು. ಇದೇ ತಿಂಗಳಿನಲ್ಲಿ ಕುಶಾಲನಗರ ತಾಲೂಕು ಮೀನುಕೊಲ್ಲಿ ಅರಣ್ಯ ಪ್ರದೇಶದಲ್ಲಿ ಗರ್ಭಿಣಿ ಆನೆಗೆ ಗುಂಡೇಟು ಪ್ರಕರಣದಲ್ಲಿ ಆನೆ ಮೃತಪಟ್ಟಿದೆ. ಬೆಳೆ ನಾಶ ಮಾಡುತ್ತಿದ್ದ ಕಾಡಾನೆಯನ್ನು ಅಮ್ಮತ್ತಿ ಸಮೀಪದ ಕಂಡಂಗಾಲದಲ್ಲಿ ಜೂನ್‌ನಲ್ಲಿ ಅರಣ್ಯ ಇಲಾಖೆ ವತಿಯಿಂದ ಸೆರೆ ಹಿಡಿಯಲಾಯಿತು. ಜೂನ್‌ನಲ್ಲಿ ಆನೆಗಳ ಜನಗಣಿ ಮಾಹಿತಿ ಪ್ರಕಟವಾಗಿದ್ದು ಕೊಡಗಿನ ಕಾಡಿನಲ್ಲಿ ೧,೧೦೩ ಆನೆಗಳು ಇರುವ ಮಾಹಿತಿ ಸಿಕ್ಕಿತು.
ಜಿಲ್ಲೆಯ ಹಿರಿಯ ಜಾನಪದ ಕಲಾವಿದೆ ರಾಣಿ ಮಾಚಯ್ಯ ಈ ಬಾರಿ ಪದ್ಮಶ್ರೀ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿಗೆ ಸಿಲುಕಿ ಅಪಾಯದ ಅಂಚಿನಲ್ಲಿದ್ದ ತಾಯಿಯನ್ನು ಸಮಯ ಪ್ರಜ್ಞೆ ಮೆರೆದು ಕಾಪಾಡಿದ ಕೂಡೂರಿನ ೯ ವರ್ಷದ ಬಾಲಕ ದೀಕ್ಷಿತ್‌ಗೆ ರಾಷ್ಟ್ರೀಯ ಶೌರ ಪ್ರಶಸ್ತಿ ಸಿಕ್ಕಿತು. ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಮಂದಪ್ಪಂಡ ತಿಮ್ಮಯ್ಯ ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಲ್ಲಿ ವಿಶಿಷ್ಟ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಜನರಲ್ ತಿಮ್ಮಯ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಮಡಿಕೇರಿ ತಾಲೂಕು ಪೆರಾಜೆ ಗ್ರಾಮ ಪಂಚಾಯತ್, ವಿರಾಜಪೇಟೆ ತಾಲೂಕು ಹೊಸೂರು ಗ್ರಾಮ ಪಂಚಾಯತ್, ಸೋಮವಾರಪೇಟೆ ತಾಲೂಕು ದೊಡ್ಡಮಳ್ತೆ ಗ್ರಾಮ ಪಂಚಾಯತ್, ಪೊನ್ನಂಪೇಟೆ ತಾಲೂಕು ಕೆ.ಬಾಡಗ ಗ್ರಾಮ ಪಂಚಾಯತ್, ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯತ್‌ಗೆ ಈ ವರ್ಷ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿತು.
ಮಡಿಕೇರಿ ತಾಲೂಕು ನಾಪೋಕ್ಲುವಿನಲ್ಲಿ ಸುಮಾರು ಒಂದು ತಿಂಗಳು ನಡೆದ ಕೊಡವ ಹಾಕಿ ಪಂದ್ಯಾವಳಿಯಲ್ಲಿ ೩ ಬಾರಿಯ ಚಾಂಪಿಯನ್ ಕುಲ್ಲೇಟಿರ ತಂಡವನ್ನು ಕುಪ್ಪಂಡ ಕುಟುಂಬ ತಂಡ ೪-೨ ಗೋಲುಗಳ ಅಂತರದಿಂದ ಸೋಲಿಸಿತು. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಕೆಗಾಗಿ ಏರ್‌ಮಾರ್ಷಲ್ ನಂದಾ ಕಾರ್ಯಪ್ಪ ತಮ್ಮ ತಂದೆ ಫೀ.ಮಾ. ಕಾರ್ಯಪ್ಪ ಹೆಸರಿನಲ್ಲಿ ನೀಡುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿ ಈ ವರ್ಷ ಕುಶಾಲನಗರ ಗ್ರಾಮಾಂತರ ಠಾಣೆಯ ಸಿಬ್ಬಂದಿ ವಿ. ಪ್ರಕಾಶ್ ಪಡೆದುಕೊಂಡರು. ಕುಶಾಲನಗರದ ರೆಸಾರ್ಟ್ ಒಂದರಲ್ಲಿ ನಡೆದಿದ್ದ ಕಳವು ಪ್ರಕರಣ ಭೇದಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಮಡಿಕೇರಿ ವಿಭಾಗದ ಸಿಐಡಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಸಿ.ಯು. ಸವಿ ಮತ್ತು ಜಿಲ್ಲಾ ಅಪರಾಧ ಪತ್ತೆ ಘಟಕದ ಹೆಡ್ ಕಾನ್ ಸ್ಟೇಬಲ್ ಎಂ.ಎನ್. ನಿರಂಜನ್ ಮುಖ್ಯಮಂತ್ರಿಗಳ ಪದಕ ಪಡೆದುಕೊಂಡರು.

ಮಡಿಕೇರಿಯಲ್ಲಿ ಇದೇ ಮೊದಲ ಬಾರಿಗೆ ಮಾವು ಮತ್ತು ಹಲಸು ಮೇಳ ಏರ್ಪಡಿಸಲಾಗಿತ್ತು. ಕೊಡಗಿನ ಜನತೆ ನೈಸರ್ಗಿಕವಾಗಿ ಹಣ್ಣು ಮಾಡಿದ ಹಲಸು ಮತ್ತು ಮಾವು ಸವಿದು ಖುಷಿಪಟ್ಟರು. ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಡಿಕೇರಿಯಲ್ಲಿ ಕೊಡವ ಸಂಸ್ಕೃತಿ, ವೇಷಭೂಷಣ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಪ್ರತಿಬಿಂಬಿಸುವ ’ಕೊಡವ ಯುವ ಮೇಳ’ ಆಯೋಜಸಲಾಗಿತ್ತು. ವಿವಿಧೆಡೆ ನೆಲೆಸಿರುವ ಕೊಡವ ಯುವಕ-ಯುವತಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಡಿಕೇರಿ ರಾಜಾಸೀಟ್‌ನಲ್ಲಿ ಆಯೋಜಿಸಿದ್ದ ಪ್ಲವರ್ ಶೋ ಗಮನ ಸೆಳೆಯಿತು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಿಲ್ಲೆಯಲ್ಲೂ ಜೂನ್‌ನಲ್ಲಿ ಆರಂಭವಾಯಿತು.
ಕೊಡಗು ಎಸ್‌ಪಿಯಾಗಿದ್ದ ಕೊಡಗು ಮೂಲದ ಎಂ.ಎ. ಅಯ್ಯಪ್ಪ ಜನವರಿಯಲ್ಲಿ ವರ್ಗಾ ಆದರು. ಅವರ ಸ್ಥಾನಕ್ಕೆ ಕೆ. ರಾಮರಾಜನ್ ನೂತನ ಎಸ್‌ಪಿಯಾಗಿ ನೇಮಕವಾದರು. ಡಿಸಿಯಾಗಿದ್ದ ಡಾ. ಬಿ.ಸಿ. ಸತೀಶ ಜೂನ್‌ನಲ್ಲಿ ವರ್ಗಾ ಆಗಿ ಅವರ ಸ್ಥಾನಕ್ಕೆ ವೆಂಕಟ್ ರಾಜಾ ಆಗಮಿಸಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಿರಿಯ ರಾಜಕಾರಣಿ ಎನ್.ಎಸ್. ಭೋಸರಾಜು ಅವನ್ನೂ ಜೂನ್‌ನಲ್ಲೇ ಸರ್ಕಾರ ನೇಮಿಸಿತು.

ಮಾರ್ಚ್‌ನಲ್ಲಿ ಮಂಡ್ಯದ ಗೆಜ್ಜೆಲಗೆರೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೊಡಗಿನ ಬಲಮುರಿ ಗ್ರಾಮದ ಚೆಯ್ಯಂಡ ಕವಿತಾ ಮತ್ತು ಅವರ ಪುತ್ರ ಆರ್ಯನ್ ಮೃತರಾದರು. ಏಪ್ರಿಲ್‌ನಲ್ಲಿ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆಯಲ್ಲಿ ಕಾರೊಂದಕ್ಕೆ ಸರ್ಕಾರಿ ಬಸ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ೬ ಪ್ರಯಾಣಿಕರ ದುರ್ಮರಣಕ್ಕೀಡಾಗಿದ್ದರು. ಮಂಡ್ಯ ಮೂಲದ ಇವರು ಧರ್ಮಸ್ಥಳಕ್ಕೆ ತೆರಳುವಾಗ ಈ ಘಟನೆ ನಡೆದಿತ್ತು. ಈ ವರ್ಷ ಮಾದಕ ವಸ್ತುಗಳ ಸೇವನೆ, ಸಾಗಾಟ ಹಾಗೂ ಮಾರಾಟದ ವಿರುದ್ಧ ಕೊಡಗು ಪೊಲೀಸರ ಆಗಾಗ್ಗೆ ಮಿಂಚಿನ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ವಿಜ್ಞಾನಿಗಳು ’ಅರ್ಕಾ ಕೂರ್ಗ್ ರವಿ’ ಎನ್ನುವ ಬಟರ್ ಫ್ರೂಟ್ ತಳಿ ಈ ವರ್ಷ ಆವಿಷ್ಕರಿಸಿದ್ದಾರೆ. ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇಗುಲಗಳ ಪ್ರಸಾದವನ್ನು ಆನ್ ಲೈನ್ ಮೂಲಕ ಕಾಯ್ದಿರಿಸಿ ಅಂಚೆ ಮೂಲಕ ತರಿಸಿಕೊಳ್ಳಬಹುದಾದ ಇ-ಪ್ರಸಾದ ಸೇವೆಯನ್ನು ಅಂದಿನ ಡಿಸಿ ಡಾ. ಬಿ.ಸಿ. ಸತೀಶ ಉದ್ಘಾಟಿಸಿದ್ದರು. ಕರ್ನಾಟಕದ ಮೊದಲ ಜೀವ ವೈವಿಧ್ಯ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಹಾರಂಗಿಯಲ್ಲಿ ಚಾಲನೆ ನೀಡಲಾಗಿತ್ತು.

ಮಡಿಕೇರಿ ವಲಯ ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ ಪೂರ್ಣಿಮಾ ತಮ್ಮ ಕಿರಿಯ ಅಧಿಕಾರಿಯಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದರೆ, ಜಿ.ಪಂ. ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಎಫ್‌ಡಿಎ ಮಹಮ್ಮದ್ ಬಷೀರ್ ಅವರ ಕುಶಾಲನಗರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಕುಶಾಲನಗರ ಸೆಸ್ಕ್ ಎಇಇ ಅಶೋಕ್ ಅವರಿಗೂ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದರು.

ಜೂನ್ ಕೊನೆಯ ತನಕವೂ ಕೊಡಗಿನಲ್ಲಿ ಮುಂಗಾರು ಕಾಣಿಸಿಕೊಂಡಿರಲಿಲ್ಲ. ಮಳೆ ಕೊರತೆಯ ಮುನ್ಸೂಚನೆ ಏಪ್ರಿಲ್‌ನಲ್ಲೇ ಸಿಕ್ಕಿತ್ತು. ಮಡಿಕೇರಿಯ ಕುಡಿಯುವ ನೀರಿನ ಎರಡು ಮೂಲಗಳು ಸಂಪೂರ್ಣ ಖಾಲಿ ಆಗಿದ್ದು, ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವುದರಿಂದ ನಾಗರಿಕರು ಸಹಕರಿಸಬೇಕು ಎಂದು ನಗರಸಭೆ ಸುತ್ತೋಲೆ ಹೊರಡಿಸಿತ್ತು. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲದ ಹಿನ್ನೆಲೆಯಲ್ಲಿ ಕೊಡಗಿಗೆ ೨೩ ಜನರ ಎನ್‌ಡಿಆರ್‌ಎಫ್ ತಂಡವನ್ನು ಕರೆಯಿಸಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net