ಆತ್ಮರಕ್ಷಣೆ ಕಲೆ ವುಶು ಸ್ತ್ರೀಯರಿಗೆ ಅವಶ್ಯ

The art of self-defense is a must for Wushu masters
ಬಾಗಲಕೋಟೆ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಂದನಾ ವಿವೇಕಾನಂದ ಗರಸಂಗಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಮುಖಂಡ ರಮೇಶ ಗಂಜಿಹಾಳ, ಮಹೇಶ ಅಥಣಿ, ಗುರುಬಸವ ಸೂಳಿಭಾವಿ, ಅಶೋಕ ಮೊಕಾಶಿ, ಸಂಗಮೇಶ ಲಾಯದಗುಂದಿ, ವಿವೇಕಾನಂದ ಗರಸಂಗಿ ಇದ್ದರು.
Published on

ಬಾಗಲಕೋಟೆ: ಅಪಾಯದ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ವುಶು, ಕರಾಟೆಗಳಂತಹ ಆತ್ಮರಕ್ಷಣಾ ಕಲೆಗಳು ಇಂದು ಅವಶ್ಯವಾಗಿವೆ ಎಂದು ರಾಜ್ಯ ವುಶು ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ವುಶು ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಕಿತ್ತೂರ ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಚಂದನಾ ವಿವೇಕಾನಂದ ಗರಸಂಗಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು, ಮಹಿಳೆಯರು ಇಂದು ಶಿಕ್ಷಣ ಪಡೆಯಲು ಉದ್ಯೋಗಕ್ಕೆ ಹೋಗುವಾಗ ಅದರಲ್ಲೂ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಥವಾ ಒಬ್ಬೊಬ್ಬರೆ ಓಡಾಡುವ ಸಮಯದಲ್ಲಿ ಕಿಡಿಗೇಡಿಗಳಿಂದ ಮತ್ತು ಇತರ ಸಂಕಷ್ಟ ಸಮಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಕಲೆ ಸಹಾಯ ಮಾಡುತ್ತದೆ ಎಂದರು.
ವುಶು ಕ್ರೀಡೆಯ ಕರ್ನಾಟಕ ರಾಜ್ಯ ಪ್ರಧಾನ ಕಚೇರಿ ಬಾಗಲಕೋಟೆಯಲ್ಲಿಯೇ ಇರುವುದರಿಂದ ಚಂದನಾ ಗರಸಂಗಿ ಸಾಧನೆ ಮಾಡಲು ಸಾಧ್ಯವಾಗಿದೆ. ಪಾಲಕರು ತಮ್ಮ ಮಕ್ಕಳಲ್ಲಿನ ಪ್ರತಿಭೆಗೆ ತಕ್ಕಂತೆ ಶಿಕ್ಷಣ ಕೊಡಿಸುವದು ಅವಶ್ಯವಾಗಿದೆ. ಮಕ್ಕಳು ಕೇವಲ ಶಿಕ್ಷಣವಂತರಾದರೆ ಸಾಲದು, ಶಿಕ್ಷಣ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಆಧುನಿಕ ಭರಾಟೆಯಲ್ಲಿ ಪಾಲಕರು ಉದ್ಯೋಗಕ್ಕೆ ಹೋಗುವ ಮತ್ತು ಹಣ ಕೂಡಿಸುವತ್ತ ಗಮನಹರಿಸಿ ದಿನ ಬೆಳಗಾದರೆ ಸಂಜೆವರೆಗೆ ದುಡಿತದಲ್ಲೆ ಮಕ್ಕಳ ಭವಿಷ್ಯ ಮರೆತು ಕೇವಲ ಸಂಡೆ ಪಪ್ಪಾ ಸಂಡೆ ಮಮ್ಮಿಯಾಗಿ ಬಿಟ್ಟಿದ್ದಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ಜತೆಗೆ ತಂದೆ-ತಾಯಿಗಳ ಬಗ್ಗೆ ಗೌರವ ಕುಂಠಿತಗೊಂಡಿದೆ. ವೃದ್ಧಾಶ್ರಮಗಳು ತಲೆ ಎತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಇಂದು ಶಿಕ್ಷಣವಂತರೇ ತಪ್ಪು ದಾರಿ ಹಿಡಿಯುತ್ತಿರುವುದು ವಿಪರ್ಯಾಸ. ಅನೇಕ ಅನಾಹುತಕಾರಿ ಘಟನೆಗಳನ್ನು ನೋಡಿದಾಗ ಅದರಲ್ಲಿ ಭಾಗಿಯಾದವರು ಸುಶಿಕ್ಷಿತರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಚಲವಾದಿ ಸಮಾಜದ ಹಿರಿಯರಾದ ರಮೇಶ ಗಂಜಿಹಾಳ ಅಧ್ಯಕ್ಷತೆ ವಹಿಸಿದ್ದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ರಾಜ್ಯ ವುಶು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಶೋಕ ಮೊಕಾಶಿ, ತರಬೇತುದಾರ ಸಂಗಮೇಶ ಲಾಯದಗುಂದಿ, ವಿವೇಕಾನಂದ ಗರಸಂಗಿ, ಕಾವೇರಿ ಗರಸಂಗಿ ಹಾಜರಿದ್ದರು. ಕಾವ್ಯ ಮತ್ತು ಅಂಜಲಿ ಪ್ರಾರ್ಥಿಸಿದರು. ಗುರುನಾಥ ತಳವಾರ ಸ್ವಾಗತಿಸಿದರು. ಸಮೀರ ರಫುಗಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net