ಸಮುದಾಯ ವಿರೋಧಿಸುವ ನೆಲೆಗಿಂತ ಪ್ರಶ್ನಿಸುವ ಕಲೆ ಭಿನ್ನ

sirsi Upanyasa
Published on

ಶಿರಸಿ: ಬಾನು ಅವರ ಕಥೆಗಳಲ್ಲಿ ಸಮುದಾಯವನ್ನು ವಿರೋಧಿಸುವ ನೆಲೆಗಿಂತ ಪ್ರಶ್ನಿಸುವ ಕಲೆ ಭಿನ್ನವಾಗಿದೆ ಎಂದು ಕನ್ನಡ ಪ್ರಾಧ್ಯಾಪಕ ಪ್ರಕಾಶ ಬಿ. ಹೇಳಿದರು.

ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಅದು ಸಾಹಿತ್ಯ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲೇಖಕಿ ಬಾನು ಮುಷ್ತಾಕ್ ಅವರು ತಮ್ಮ ಕೃತಿಗಳಲ್ಲಿ ಧರ್ಮದೊಳಗಿನ ದ್ವಂದ್ವಗಳು ಮತ್ತು ಅದರಿಂದ ಹೆಣ್ಣಿನ ಮೇಲೆ ಆಗುವ ದೌರ್ಜನ್ಯ, ಅನಿಷ್ಟ ಆಚರಣೆಯ ಹಿಂದಿನ ನಿಲುವುಗಳು, ಧರ್ಮದ ಒಳಗೆ ಗಂಡಿಗಿರುವ ಸ್ವಾತಂತ್ರ್ಯ ಮತ್ತು ಹೆಣ್ಣಿನ ಬಲಹೀನತೆ, ಧರ್ಮದ ಒಳಗೆ, ಹೊರಗೆ ನಡೆಯುವ ಹೋರಾಟ ಅದನ್ನು ಮೀರಿ ಬದುಕುವ ಹಾಗೂ ಇಂತಹ ಸಂದಿಗ್ಧತೆಯನ್ನು ಬರಹದ ಮೂಲಕ ನಿಭಾಯಿಸುವ ದಿಟ್ಟತನ ಆದರ್ಶಪ್ರಾಯವಾಯವಾಗಿದೆ.

ಬಾನು ಮುಷ್ತಾಕರ ಕಥೆಗಳಲ್ಲಿ ಸ್ತ್ರೀ ಪಾತ್ರಗಳಿಗಿಂತ ಹೆಣ್ಣಿನ ಸಂವೇದನೆ ಮುಖ್ಯವಾಗಿದೆ. ಅಚ್ಚಗನ್ನಡದ ದೇಸಿ ಪದ ಹೆಣ್ಣು. ಈ ಶಬ್ದವನ್ನು ನಾವು ಬರವಣಿಗೆಯಲ್ಲಿ ಬಳಸುವಾಗ ತುಂಬಾ ಜಾಗೃತಿಯಿಂದ ಬಳಸಬೇಕು. ಸ್ತ್ರೀ ಪದ ಸಂಸ್ಕೃತದ ಪದ ಇದು ಯಾವಾಗಲೂ ಶ್ರೀಮಂತ, ಸುಶಿಕ್ಷಿತ, ಸಂರಕ್ಷಿತ ವಲಯದಲ್ಲಿ ಗುರುತಿಸಿಕೊಳ್ಳುವ ಮಹಿಳೆಯನ್ನು ಕುರಿತಾಗಿ ಬಳಸುವ ಸಂಬೋಧನೆ ಪದ. ಆದರೆ, ಹೆಣ್ಣು ಎಂಬ ಪದ ಬಳಕೆಯನ್ನು ಗಮನಿಸಿದಾಗ ತೀರ ದೇಸಿಯ ನೆಲೆಯಲ್ಲಿ ಅದನ್ನು ಗ್ರಹಿಸಬೇಕು.

ಈ ಪದವು ತುಳಿತಕ್ಕೆ ಒಳಗಾದ ದಮನಿತ, ಅಬಲೆ, ಸಮಾಜದಲ್ಲಿನ ಅನಿಷ್ಟಗಳಿಗೆ ಬಲಿಯಾದ ಸಂತ್ರಸ್ತೆ, ಶೋಷಿತೆ ಎಂಬ ಪರಿಭಾಷೆಗಳಿಗೆ ಅನ್ವಯಿಸುವ ಶಬ್ದ ಧ್ವನಿಯಾಗಿ ಬಳಸುವುದನ್ನು ಗಮನಿಸಿದಾಗ ಬಾನು ಅವರ ಕಥೆಗಳಲ್ಲಿ ಬರುವ ಹೆಣ್ಣು ಈ ಮಾದರಿಯ ಸಾಮಾಜಿಕ ಸಂಘರ್ಷಕ್ಕೆ ಮುಖಾಮುಖಿಯಾದವಳು ಎಂಬುದು ಎದ್ದು ಕಾಣುತ್ತದೆ ಎಂದರು.

ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net