

ವಿಜಯಪುರ: ಸಮುದಾಯದೊಂದಿಗೆ ಬೆರೆತು ಅನುಭವ ಪಡೆಯುವುದೇ ನಿಜವಾದ ಶಿಕ್ಷಣ. ಅದನ್ನು ತರಬೇತಿ ಶಿಬಿರಗಳಿಂದ ಮಾತ್ರ ಪಡೆಯಬಹುದು ಎಂದು ಮಹಿಳಾ ವಿವಿ ಕುಲಸಚಿವ ಪ್ರೊ. ಬಿ.ಎಸ್.ನಾವಿ ತಿಳಿಸಿದರು.
ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದ ವತಿಯಿಂದ ಬಿಇಡಿ ಪ್ರಶಿಕ್ಷಣಾರ್ಥಿಗಳಿಗಾಗಿ ಮಂಗಳವಾರ ಆಯೋಜಿಸಿದ್ದ ನಾಗರಿಕ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಎಂದರೆ ಕೇವಲ ಓದು, ಬರಹ ಕಲಿಯುವುದಷ್ಟೇ ಅಲ್ಲ, ಬದಲಾಗಿ ಬದುಕಿನ ನಿಜವಾದ ಕಲೆ ಹೊಂದುವುದೇ ಶಿಕ್ಷಣ. ಬದುಕಿಗೆ ಬೇಕಾದ ಕಲೆಯನ್ನು ನಾವು ಸಮಾಜ ಮತ್ತು ಸಮುದಾಯದಿಂದಲೂ ಕಲಿಯಲು ಸಾಧ್ಯ ಎಂದರು.
ನಿವೃತ್ತ ಮೌಲ್ಯಮಾಪನ ಕುಲಸಚಿವ ಪ್ರೊ.ವಿ.ವಿ. ಮಳಗಿ ಮಾತನಾಡಿ, ಗುಣಾತ್ಮಕ ಶಿಕ್ಷಣವು ಶಿಕ್ಷಕರ ಮೇಲೆ ಅವಲಂಬನೆಯಾಗಿದ್ದು, ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ತರಬೇತಿ ರಾಜ್ಯದಲ್ಲೇ ಗುಣಮಟ್ಟದ ತರಬೇತಿಯಾಗಿದೆ ಎಂದು ಶ್ಲಾಘಿಸಿದರು.
ಶಿಕ್ಷಣ ನಿಕಾಯದ ಡೀನ್ ಪ್ರೊ.ರಾಜಕುಮಾರ ಮಾಲಿಪಾಟೀಲ್ ಮಾತನಾಡಿ, ಆತ್ಮ್ಮವಿಶ್ವಾಸದಿಂದ ವೃತ್ತಿ ಸೇವೆಯಲ್ಲಿ ತೊಡಗಿಸಿಕೊಂಡು ಉತ್ತಮ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಿರಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮಹಿಳಾ ವಿವಿ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಷ್ಣು ಎಂ.ಶಿಂದೆ ಅಧ್ಯಕ್ಷತೆ ವಹಿಸಿದ್ದರು. ಡಾ.ಪ್ರಕಾಶ ಸಣ್ಣಕ್ಕನವರ, ಡಾ. ಅಶೋಕ ಸುರಪೂರ, ಡಾ. ಪ್ರಕಾಶ ಬಡಿಗೇರ, ಡಾ.ರೂಪಾ ನಾಯ್ಕೋಡಿ ಹಾಗೂ ಶಿಬಿರದ ಸಂಯೋಜಕ ಡಾ.ಯು.ಕೆ. ಕುಲಕರ್ಣಿ ಮತ್ತಿತರರಿದ್ದರು.
ಪ್ರಶಿಕ್ಷಣಾರ್ಥಿಗಳು ಮಹಿಳಾಗೀತೆ ಪ್ರಸ್ತುತಪಡಿಸಿದರು. ತೇಜಸ್ವಿನಿ ಪಾಟೀಲ ಸ್ವಾಗತಿಸಿದರು. ಸಾವಿತ್ರಿ ಕಜ್ಜಿಡೊಣೆ ನಿರೂಪಿಸಿದರು. ಸ್ವಾತಿ ವಂದಿಸಿದರು.