ಮುನಿಸು ಮರೆತ ರೂಪಕಲಾ

bethamangala
Published on

ವಿಜಯವಾಣಿ ಸುದ್ದಿಜಾಲ ಬೇತಮಂಗಲ

ಒಂದೂವರೆ ವರ್ಷದಿಂದ ಟಿ.ಗೊಲ್ಲಹಳ್ಳಿ ಗ್ರಾಪಂ ಕಡೆ ಸುಳಿಯದೆ, ಮುನಿಸಿಕೊಂಡಿದ್ದರು ಎನ್ನಲಾದ ಶಾಸಕಿ ರೂಪಕಲಾ ಕೋಪ ಮರೆತು ಆಡಳಿತ ಮಂಡಳಿ ಜತೆಗೂಡಿ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿದರು.

ಒಂದೂವರೆ ವರ್ಷದ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಗೊಲ್ಲಹಳ್ಳಿ ಪಂಚಾಯಿತಿಯಲ್ಲಿ ಆಪ್ತರನ್ನು ಅಧ್ಯಕ್ಷ ಗಾದಿ ದೊರಕಿಸಿಕೊಡಲು ಶಾಸಕಿ ರೂಪಕಲಾ ಮುಂದಾಗಿದ್ದರು. ಆದರೆ, ಬಹುತೇಕ ಸದಸ್ಯರು ಶಾಸಕರ ಅಭ್ಯರ್ಥಿ ವಿರುದ್ಧ ಮತ್ತು ಮಂಜುನಾಥ್​ ಪರವಾಗಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಸದಸ್ಯರೂ ರೂಪಕಲಾ ಕಟ್ಟಾ ಬೆಂಬಲಿಗರೇ ಆಗಿದ್ದ ಕಾಂಗ್ರೆಸ್​ನ ಮಂಜುನಾಥ್​ ಅವರನ್ನು ಅಧ್ಯಕ್ಷ ಮತ್ತು ತುಳಸಮ್ಮ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದರು. ಈ ವಿಚಾರಕ್ಕೆ ಮುನಿಸಿಕೊಂಡಿದ್ದ ರೂಪಕಲಾ ಅವರ ಹತ್ತಿರ ಆಗಲು ಪಂಚಾಯಿತಿ ಸದಸ್ಯರು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ.

ಅಭಿವೃದ್ಧಿಯೇ ಎಲ್ಲದಕ್ಕೂ ಪರಿಹಾರ ಎಂಬಂತೆ ಅಧ್ಯಕ್ಷ ಮಂಜುನಾಥ್​ ಉಪಾಧ್ಯಕ್ಷೆ ತುಳಸಮ್ಮ ಸೇರಿ ಎಲ್ಲ 26 ಸದಸ್ಯರು ಸೇರಿ ಪಂಚಾಯಿತಿ ವ್ಯಾಪ್ತಿಯ ಕ್ಷೇತ್ರದ ಹತ್ತಾರು ಹಳ್ಳಿಗಳಲ್ಲಿ ಮೂಲಸೌಲಭ್ಯ ಸೇರಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಮಾ.12ರಂದು ಹಮ್ಮಿಕೊಂಡಿದ್ದ ಗ್ರಾಪಂ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕಿ ಹಾಗೂ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ,ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಆದರೆ, ರೂಪಕಲಾ ಬರುವುದು ಅನುಮಾನ ಎನ್ನಲಾಗಿತ್ತು.

ಅಧಿವೇಶನಕ್ಕೆ ಹಾಜರಾಗಬೇಕಾದ ಸಮಯದಲ್ಲೂ ಮುನಿಸು ಮರೆತ ಶಾಸಕಿ ರೂಪಕಲಾ ಬುಧವಾರ ಬೆಳಗ್ಗೆ ಗೊಲ್ಲಹಳ್ಳಿ ಪಂಚಾಯಿತಿಗೆ ಬಂದು ನೂತನ ಕಟ್ಟಡ ಉದ್ಘಾಟನೆ ಮಾಡುವ ಮೂಲಕ ಸಜ್ಜನಿಕೆ ಪ್ರದರ್ಶಿಸಿದರು.

"ಆಡಳಿತ ನಡೆಸುವ ಕಚೇರಿ ದೇವಾಲಯ ಇದ್ದಂತೆ. ಇಲ್ಲಿ ನಾವು ಶುದ್ಧವಾಗಿ, ಪ್ರಾಮಾಣಿಕವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಗೊಲ್ಲಹಳ್ಳಿ ಪಂಚಾಯಿತಿ ಆಡಳಿತ ಮಂಡಳಿ ಒಗ್ಗಟ್ಟಿನಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನರೇಗಾ ಯೋಜನೆಯನ್ನು ಅರ್ಥಪೂರ್ಣವಾದ ಕಾರ್ಯಗಳಿಗೆ ವಿನಿಯೋಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಜನರಿಗೆ ಹತ್ತಿರ ಆಗಲಿ."

- ರೂಪಕಲಾ

ಕೆಜಿಎ್​ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net