ವ್ಯವಹಾರಕ್ಕೆ ಅಗತ್ಯ ಗ್ರಾಹಕರನ್ನು ಸೆಳೆಯುವ ಕಲೆ: ಸೋನಿಯಾ ಯಶೋವರ್ಮ ಸಲಹೆ

Bel_business
Published on

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಸಮಯವನ್ನು ವೇಸ್ಟ್ ಮಾಡುವ ಬದಲು ಇನ್ವೆಸ್ಟ್ ಮಾಡಬೇಕು. ಉತ್ತಮ ಉದ್ಯೋಗಿಗಳು ಅಥವಾ ವ್ಯಾಪಾರಿಗಳಾಗಲು ಸೇವಾ ಮನೋಭಾವ, ಸೃಜನಶೀಲತೆಯೊಂದಿಗೆ ಗ್ರಾಹಕರನ್ನು ಸೆಳೆಯುವ ಶಕ್ತಿ ಇರಬೇಕು ಎಂದು ಸೋನಿಯಾ ಯಶೋವರ್ಮ ಹೇಳಿದರು. ಬುಧವಾರ ಉಜಿರೆಯ ಶ್ರೀ ಧ.ಮಂ.ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗ ಮತ್ತು ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಲ್ಲಿ ವ್ಯವಹಾರದ ಕುರಿತು ಅರಿವು ಮೂಡಿಸಲು ಕಾಲೇಜಿನ ಒಳಾಂಗಣದಲ್ಲಿ ಆಯೋಜಿಸಲಾಗಿದ್ದ ವ್ಯವಹಾರ ಮಾರಾಟ ಮೇಳದ ಎರಡನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ವಿಕ್ರಮ್ ಮಾತನಾಡಿ, ಜೀವನದಲ್ಲಿ ಪ್ರತಿನಿತ್ಯ ವ್ಯವಹಾರ ನಡೆಯುತ್ತಲೇ ಇರುತ್ತದೆ. ವ್ಯವಹಾರ ನಡೆಸಲು ಕನೆಕ್ಟಿವಿಟಿ ಮುಖ್ಯವಾಗಿರುತ್ತದೆ. ವೈಯಕ್ತಿಕ ಮತ್ತು ವ್ಯಾವಹಾರಿಕ ಬದುಕು ಒಂದಕ್ಕೊಂದು ಹೊಂದಿಕೊಂಡು ಹೋಗಬೇಕು ಎಂದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯದಲ್ಲಿ ಕಲಿಯುವ ವ್ಯವಹಾರವನ್ನು ಕಾರ್ಯರೂಪಕ್ಕೆ ತರುವ ಸುದಿನ ಇದಾಗಿದೆ. ಈ ರೀತಿಯ ವೇದಿಕೆ ಸ್ವಉದ್ಯೋಗಕ್ಕೆ ನೆರವಾಗುತ್ತದೆ ಎಂದರು. ಕಾಲೇಜಿನ ಆಡಳಿತಾಂಗ ಕುಲಸಚಿವೆ ಡಾ.ಶಲೀಪ್ ಕುಮಾರಿ, ಪರೀಕ್ಷಾಂಗ ಕುಲಸಚಿವೆ ನಂದಾ ಕುಮಾರಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ ಕೆ., ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶಕುಂತಲಾ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶರ್ಮಿಳಾ ನಿರೂಪಿಸಿದರು. ಆಹಾರ ಪದಾರ್ಥ, ತರಕಾರಿ ವ್ಯಾಪಾರ ಸಹಿತ 25 ವಿವಿಧ ಮಳಿಗೆಗಳನ್ನು ತೆರೆದು ವಿದ್ಯಾರ್ಥಿಗಳು ವ್ಯವಹಾರ ನಡೆಸಿದರು.

ಕಾಲೇಜಿನಲ್ಲಿ ಸ್ವಾವಲಂಬನೆ ಕುರಿತು ಹಲವಾರು ಚಟುವಟಿಕೆಗಳು ನಡೆಯುತ್ತವೆ. ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು. ಸಮಯವನ್ನು ಸದುಪಯೋಗಪಡಿಸಿಕೊಂಡು ಪ್ರಯತ್ನಶೀಲರಾದಾಗ ಜೀವನ ಯಶಸ್ಸಿನ ಹಾದಿ ಹಿಡಿಯುತ್ತದೆ. ಹೊಸ ವರ್ಷ ಖಾಲಿ ಪುಸ್ತಕವಿದ್ದಂತೆ. ಅದರಲ್ಲಿ ಬಣ್ಣ ತುಂಬುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಎಲ್ಲರೂ ಉತ್ತಮ ಬಣ್ಣವನ್ನು ತುಂಬುತ್ತಾ ಸಾಗಿ. ಅದಕ್ಕೆ ಈ ವ್ಯವಹಾರ ಮೊದಲ ಪುಟವಾಗಲಿ. - ಸೋನಿಯಾ ಯಶೋವರ್ಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net