ಕಡವೆ ಬೇಟೆಯಾಡಿದ್ದವನ ಬಂಧನ

16 HANUR 8
Published on


ಚಾಮರಾಜನಗರ : ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯದ ಹೊಳೆಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ಶನಿವಾರ ಕಡವೆ ಬೇಟೆಯಾಡಿ ಮಾಂಸ ಕೊಂಡೊಯ್ಯುತ್ತಿದ್ದವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.


ತಾಲೂಕಿನ ಮರಿಯಪುರ ಗ್ರಾಮದ ಅರ್ಪುದರಾಜ್ ಬಂಧಿತ. ಈತ ಇದೇ ಗ್ರಾಮದ ಜಾನ್ ಗುಂಡಪ್ಪ ಹಾಗೂ ಕರಿಯಪ್ಪ ಜತೆಗೂಡಿ ಕಾವೇರಿ ವನ್ಯಜೀವಿ ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಅರಣ್ಯ ಪ್ರದೇಶಕ್ಕೆ ನಾಡ ಬಂದೂಕಿನೊಂದಿಗೆ ಅಕ್ರಮವಾಗಿ ಪ್ರವೇಶಿಸಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ಒಯ್ಯುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ನಿರಂಜನ್, ಡಿಅರ್‌ಎಫ್‌ಗಳಾದ ಶ್ರೀನಿವಾಸ್, ಆನಂದ್ ಹಾಗೂ ವನಪಾಲಕರಾದ ಯಲಗೂರಪ್ಪ ಗುಬ್ಬಿ, ಶಿವಲಿಂಗಪ್ಪ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿದಾಗ ಅರ್ಪುದರಾಜ್ ಸಿಕ್ಕಿ ಬಿದ್ದಿದ್ದಾನೆ.


ಮಾಂಸ ಹಾಗೂ ನಾಡ ಬಂದೂಕನ್ನು ವಶಪಡಿಸಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಆತನನ್ನು ಕೊಳ್ಳೇಗಾಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರ ಪತ್ತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net