

ಕೆ.ಆರ್.ಪೇಟೆ: ಪುರಸಭೆ ಸದಸ್ಯ ಬಸ್ ಸಂತೋಷ್ ಬಂಧನ ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಾಧಿಕಾರಿ ಸತೀಶ್‌ಕುಮಾರ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಸದಸ್ಯನ ಬಂಧನವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಾಧಿಕಾರಿ ಮತ್ತು ಪೊಲೀಸರ ವರ್ತನೆ ವಿರುದ್ಧ ಜೆಡಿಎಸ್, ಕಾಂಗ್ರೆಸ್ ಮತ್ತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಜತೆಗೆ ಅಂತೆಯೇ, ಸಚಿವ ಕೆ.ಸಿ.ನಾರಾಯಣಗೌಡರು ಕ್ಷೇತ್ರದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆನ್ನುವ ಮಾತು ಕೇಳಿಬರುತ್ತಿವೆ.
ಹಿಂದೆಯೂ ನಡೆದಿತ್ತು: ಮುಖ್ಯಾಧಿಕಾರಿ ಸತೀಶ್‌ಕುಮಾರ್ ವಿರುದ್ಧ ಈ ಹಿಂದೆಯೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಸಹೋದರ ಪುರಸಭೆ ಸದಸ್ಯ ಕೆ.ಬಿ. ಮಹೇಶ್ ನನ್ನ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಿದ್ದರು.
ಅಂತೆಯೇ, ಮಾಜಿ ಸದಸ್ಯ ಚಕ್ರಪಾಣಿ ವಿರುದ್ಧ ಕೂಡ ಇದೇ ರೀತಿ ಆರೋಪ ಮಾಡಿ ದೂರು ನೀಡಿದ್ದರು. ಆ ವೇಳೆ ಪುರಸಭೆ ಸದಸ್ಯರು, ಮುಖ್ಯಾಧಿಕಾರಿಗೆ ತಿಳಿವಳಿಕೆ ಹೇಳಿ ಮನವೊಲಿಸಿ ದೂರು ವಾಪಸ್ ಪಡೆಯುವಂತೆ ನೋಡಿಕೊಂಡಿದ್ದರು ಎನ್ನಲಾಗಿದೆ.
ಇನ್ನು ಮುಖ್ಯಾಧಿಕಾರಿ ವಿರುದ್ಧ ಸಂತೋಷ್ ವಿಡಿಯೋ ಸಹಿತ ನೀಡಿದ ದೂರನ್ನು ಸ್ವೀಕರಿಸದಿರುವ ಪೊಲೀಸರ ವಿರುದ್ಧವೂ ಸಾರ್ವಜನಿಕರ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್, ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ. ಮುಖ್ಯಾಧಿಕಾರಿ ಮತ್ತು ಪೊಲೀಸರ ನಡೆ ವಿರೋಧಿಸಿ ಮಾ.16ರಂದು ಬೃಹತ್ ಪ್ರತಿಭಟನೆ ಮಾಡುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಜೆಡಿಎಸ್ ಸದಸ್ಯರಾದ ಬಿ.ಎಲ್.ದೇವರಾಜು, ಎಚ್.ಟಿ.ಮಂಜು, ತಾಲೂಕು ಅಧ್ಯಕ್ಷ ಜಾನಕಿರಾಮ್, ತಾಪಂ ಸದಸ್ಯ ಮೋಹನ್, ಮನ್‌ಮುಲ್ ನಿರ್ದೇಶಕ ಡಾಲು ರವಿ, ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್, ರವೀಂದ್ರಬಾಬು, ಕೆ.ಬಿ.ಮಹೇಶ್ ಹಾಜರಿದ್ದರು.
ಮಾತಿನ ಚಕಮಕಿ ವೈರಲ್ : ಗುರುವಾರ ಉದ್ಯಾನದಲ್ಲಿ ಸದಸ್ಯ ಬಸ್ ಸಂತೋಷ್ ಮತ್ತು ಮುಖ್ಯಾಧಿಕಾರಿ ಸತೀಶ್‌ಕುಮಾರ್ ನಡುವೆ ನಡೆದಿರುವ ಮಾತಿನ ವಿಡಿಯೋ ವೈರಲ್ ಆಗುತ್ತಿದೆ.
ಅಭಿವೃದ್ಧಿ ಕಾಮಗಾರಿಗೆಂದು ತೆಗೆಸಲಾದ ಗುಂಡಿಯನ್ನು ಮುಚ್ಚಿಸುತ್ತಿದ್ದ ಮುಖ್ಯಾಧಿಕಾರಿ ವರ್ತನೆ ಖಂಡಿಸಿ ಸದಸ್ಯ ಪ್ರಶ್ನೆ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದೆ. ಸದಸ್ಯ ಬಸ್ ಸಂತೋಷ್, ಸ್ಥಳಕ್ಕೆ ಬಂದಾಗ ಮೊಬೈಲ್‌ನಲ್ಲಿ ಕ್ಯಾಮರಾ ಆನ್ ಮಾಡಿದ್ದಾರೆ. ಗುಂಡಿ ಮುಚ್ಚಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೋಪದಲ್ಲಿ ಉತ್ತರಿಸಿರುವ ಅಧಿಕಾರಿ, ಏನೀಗ..ಏನೀಗ…ಹೊಡಿತ್ತೀರೇನ್ರಿ, ಹೊಡೆತ್ತೀರೇನ್ರಿ ಎಂದು ಏರು ದನಿಯಲ್ಲಿಯೇ ಮಾತನಾಡಿದ್ದಾರೆ. ಅಲ್ಲದೆ, ವಿಡಿಯೋ ಏಕೆ ಮಾಡುತ್ತಿದ್ದೀರಿ. ಅದರ ಅವಶ್ಯಕತೆಯಿಲ್ಲ ಎಂದಿದ್ದಾರೆ. ಮುಂದುವರಿದು ಏನ್ರಿ ಮಾಡುತ್ತೀರಿ ಎಂದು ಜೋರು ದನಿಯಲ್ಲಿಯೇ ಪ್ರಶ್ನಿಸಿದ್ದಾರೆ.
ಹೀಗೆ ಸುಮಾರು ಹೊತ್ತು ಇಬ್ಬರ ನಡುವೆ ಮಾತುಕತೆ ನಡೆದಿದ್ದು, ಮುಖ್ಯಾಧಿಕಾರಿಯೇ ಹೆಚ್ಚಾಗಿ ಮಾತನಾಡಿ ಸದಸ್ಯನ ವಿರುದ್ಧ ದೂರು ನೀಡಿದ್ದಾರೆನ್ನುವ ಮಾತುಗಳು ಬರುತ್ತಿವೆ. ಅಲ್ಲದೆ, ಜನರಿಂದ ಆಯ್ಕೆಯಾದ ಪ್ರತಿನಿಧಿಗೆ ಗೌರವ ಕೊಡದ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂಬ ಟೀಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ ಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.