ಬೇಟೆಯಾಡಲು ಹೊಂಚು ಹಾಕುತ್ತಿದ್ದವನ ಬಂಧನ

RemasterDirector_1a5c03258
ಪಿರಿಯಾಪಟ್ಟಣ ತಾಲೂಕಿನ ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ಆರೋಪಿ ಮೋಹನ್ ಜತೆ ಅರಣ್ಯ ಇಲಾಖೆಯ ಇ. ಸುಬ್ರಮಣ್ಯ, ಪಿ.ಎಲ್.ರಾಮಣ್ಣ ಇತರರಿದ್ದರು.
Published on


ಪಿರಿಯಾಪಟ್ಟಣ: ಅರಣ್ಯ ಪ್ರದೇಶದ ಒಳಗೆ ಬೇಟೆಯಾಡಲು ಹೊಂಚು ಹಾಕುತ್ತಿದ್ದ ಮೂವರು ಆರೋಪಿಗಳನ್ನು ಬೆನ್ನಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಮತ್ತಿಬ್ಬರು ಪರಾರಿಯಾಗಿದ್ದಾರೆ.

ತಾಲೂಕಿನ ಹಬಟೂರು ಗ್ರಾಮದ ಎನ್.ಮೋಹನ್ ಬಂಧಿತ. ತಾಲೂಕಿನ ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯ ಗಸ್ತಿನ ಕುದುರೆ ಬಿದ್ದ ಮೋರಿ ಅರಣ್ಯ ಪ್ರದೇಶದ ಬಳಿ ಸೋಮವಾರ ರಾತ್ರಿ ಅರಣ್ಯ ಇಲಾಖೆಯ ಸಿಬ್ಬಂದಿ ಉಪ ವಲಯ ಅರಣ್ಯಾಧಿಕಾರಿ ಪಿ.ಎಲ್.ರಾಮಣ್ಣ, ಗಸ್ತು ಅರಣ್ಯ ಪಾಲಕರು ರಾತ್ರಿ ಗಸ್ತು ಮಾಡುವಾಗ ಅನುಮಾನಾಸ್ಪದವಾಗಿ ಅರಣ್ಯ ಪ್ರದೇಶದ ಒಳಗೆ ಕಾಡಿನ ಸುತ್ತ ಟಾರ್ಚ್ ಬೆಳಕನ್ನು ಹಾಯಿಸುತ್ತ ವನ್ಯಪ್ರಾಣಿಯನ್ನು ಬೇಟೆಯಾಡಲು ಬಂದೂಕಿನೊಂದಿಗೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಸುತ್ತುವರಿದು ಬೆನ್ನಟ್ಟಿದ್ದಾರೆ.

ಆ ವೇಳೆ ಹಬಟೂರು ಗ್ರಾಮದ ಮೋಹನ್ ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಆರೋಪಿಯಿಂದ ಬೇಟೆಯಾಡಲು ತಂದಿದ್ದ ಒಂದು ಕತ್ತಿ, ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳಾದ ಹಬಟೂರು ಗ್ರಾಮದ ಕಾಂತರಾಜು ಮತ್ತು ಸ್ವಾಮಿ ಎಂಬುವರು ಬಂದೂಕಿನೊಂದಿಗೆ ಪರಾರಿಯಾಗಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net