

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಧಿಕ ಸೋಂಕಿತರು ಇರುವ ಗ್ರಾಮ/ಪ್ರದೇಶಗಳನ್ನು ಪೂರ್ಣವಾಗಿ ಲಾಕ್‌ಡೌನ್‌ಗೆ ಒಳಪಡಿಸುವುದು ಹಾಗೂ ಸೋಂಕಿತರ ಮನೆಗಳನ್ನು ಸೀಲ್‌ಡೌನ್ ಮಾಡುವುದರ ಸಹಿತ ಲಾಕ್‌ಡೌನ್‌ನ್ನು ಮತ್ತಷ್ಟು ಬಿಗಿಗೊಳಿಸಿ ಕಟ್ಟುನಿಟ್ಟಿನ ನಿರ್ಬಂಧ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಕೋವಿಡ್-19ರ ಮಾರ್ಗಸೂಚಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಜಾರಿಯಲ್ಲಿರುವ ಲಾಕ್‌ಡೌನ್ ಅವಧಿ ವಿಸ್ತರಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲಾದ್ಯಂತ ಕರೊನಾ ಸೋಂಕಿನ ಪ್ರಮಾಣ ನಿರೀಕ್ಷೆಯಷ್ಟು ಕಡಿಮೆಯಾಗಿಲ್ಲ. ಇದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಬಂಟ್ವಾಳ ತಾಲೂಕಿನಲ್ಲಿ ಹಳ್ಳಿಯ ಕಡೆ ವೈದ್ಯರ ನಡೆ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಅದೇ ರೀತಿ ಇತರ ತಾಲೂಕುಗಳಲ್ಲಿಯೂ ಪರಿಣಾಮಕಾರಿ ಆಗಬೇಕು ಎಂದು ಸೂಚನೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಸೋಂಕು ಹೆಚ್ಚಿದ್ದರೂ ಜನರು ನಿರ್ಭೀತರಾಗಿ ಓಡಾಡುತ್ತಿದ್ದಾರೆ. ಜನರು ಜಾಗೃತರಾಗಿ ಕರೊನಾ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಿದಲ್ಲಿ ಸೋಂಕು ನಿಯಂತ್ರಣ ಸಾಧ್ಯ ಎಂದರು.
ಈಗಿರುವ ನಿರ್ಬಂಧಗಳಲ್ಲಿ ಯಾವುದನ್ನು ಸಡಿಲು ಮಾಡಿದರೂ ಸೋಂಕು ನಿಯಂತ್ರಣ ಕಷ್ಟವಾಗುತ್ತದೆ ಎಂದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಅಗತ್ಯ ಪರಿಕರಗಳು, ವಾಹನ ಸೇರಿದಂತೆ ಲ್ಯಾಬ್ ಟೆಕ್ನಿಷಿಯನ್‌ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡಲು ಕ್ರಮ ವಹಿಸಲಾಗಿದೆ ಎಂದರು.
ಜಿ.ಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಈಗಾಗಲೆ ಹೋಂ ಐಸೋಲೇಷನ್‌ನಲ್ಲಿರುವ ಮನೆಗಳನ್ನು ಸೀಲ್ಡೌನ್ ಮಾಡಲಾಗುತ್ತಿದೆ. ಕೆಲವು ಗ್ರಾಮ ಪಂಚಾಯತಿ ಪ್ರತಿನಿಧಿಗಳು ಹೆಚ್ಚು ಸೋಂಕಿರುವ ತಮ್ಮ ಗ್ರಾಮಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಿ ಎಂದು ಸ್ವಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ ಎಂದರು.
ಶಾಸಕರಾದ ಡಾ.ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ, ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಡಿಸಿಪಿ ಹರಿರಾಂ ಶಂಕರ್, ಎ.ಸಿ ಮದನ್ ಮೋಹನ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕಿಶೋರ್ ಉಪಸ್ಥಿತರಿದ್ದರು.
ಹೋಂ ಐಸೋಲೇಶನ್ ಮನೆಗಳು ಸೀಲ್‌ಡೌನ್!: ಸೋಂಕು ಹೆಚ್ಚಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಹಾಗೂ ನಗರಗಳ ವ್ಯಾಪ್ತಿಯ ಪ್ರದೇಶವನ್ನು ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ಗೆ ಒಳಪಡಿಸಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಸೋಂಕು ಹೊಂದಿರುವವರ ಮನೆಗಳನ್ನು ಸೀಲ್ಡೌನ್ ಮಾಡಬೇಕು. 5ಕ್ಕಿಂತ ಹೆಚ್ಚು ಪ್ರಕರಣಗಳು ಗ್ರಾಮಗಳಲ್ಲಿ ಕಂಡುಬಂದಲ್ಲಿ ಕಂಟೇನ್ಮೆಂಟ್ ವಲಯ ಘೋಷಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
40 ಗ್ರಾಮಗಳಿಗೆ ಪೂರ್ಣ ಲಾಕ್: ಜಿಲ್ಲೆಯ 40 ಗ್ರಾಮಗಳಲ್ಲಿ ಹಾಗೂ ಉಳ್ಳಾಲ, ಸೋಮೇಶ್ವರ, ಕೋಟೆಕಾರು, ಬೆಳ್ತಂಗಡಿಯ ನಗರ ಪ್ರದೇಶಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಇರುವುದು ಕಂಡುಬರುತ್ತಿವೆ. ಈ ಪ್ರದೇಶಗಳ ಸಂಪೂರ್ಣ ಲಾಕ್‌ಡೌನ್ ಮಾಡುವ ಪ್ರಸ್ತಾವನೆ ಆಧರಿಸಿ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ವಿಧಿಸಲು ಆದೇಶಿಸಲಾಗವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಪಾಸಿಟಿವಿಟಿ ದರ:
ಸುಳ್ಯ ಶೇ.27
ಬೆಳ್ತಂಗಡಿ ಶೇ.24
ಪುತ್ತೂರು ಶೇ.22
ಮಂಗಳೂರು ಶೇ.15
ಬಂಟ್ವಾಳ ಶೇ.12
ಯಾರಿಗೆ ವಿನಾಯಿತಿ?: ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10 ಗಂಟೆವರೆಗೆ ಅವಕಾಶವಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕನ್ನಡಕ ಮಾರಾಟ-ರಿಪೇರಿ ಅಂಗಡಿಗಳು, ಗ್ಯಾರೇಜು ಹಾಗೂ ವಾಹನಗಳ ಸರ್ವೀಸ್ ಸೆಂಟರ್‌ಗಳನ್ನು (ವಾಹನ ಶೋ ರೂಂ ಹೊರತು) ತೆರೆಯಲು ಅನುಮತಿ ಇದೆ. ಬ್ಯಾಂಕಿಂಗ್ ಚಟುವಟಿಕೆಗಳಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವಿದೆ.
506 ಮಂದಿಗೆ ಕರೊನಾ, ಮೂವರು ಸಾವು: ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಹೊಸ 506 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. 479 ಮಂದಿ ಸೋಂಕು ಮುಕ್ತರಾಗದ್ದಾರೆ. 6,972 ಸಕ್ರಿಯ ಪ್ರಕರಣಗಳಿವೆ. ಒಂದೇ ಕಡೆ ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾದ 11 ಪ್ರದೇಶಗಳನ್ನು (ಬೆಳ್ತಂಗಡಿ 6, ಮಂಗಳೂರು 2, ಪುತ್ತೂರು, ಸುಳ್ಯ, ಬಂಟ್ವಾಳ ಒಂದೊಂದು) ಶುಕ್ರವಾರ ಕಂಟೇನ್ಮೆಂಟ್ ವಲಯಗಳೆಂದು ಆರೋಗ್ಯ ಇಲಾಖೆ ಘೋಷಿಸಿದೆ. ಕಾಸರಗೋಡು ಜಿಲ್ಲೆಯ 499 ಮಂದಿಗೆ ಕೋವಿಡ್ ದೃಢಪಟ್ಟಿದೆ.