

ಹುನಗುಂದ: ಪಟ್ಟಣದ ವಾರ್ಡ್ ನಂ. 23ರ ಕುಂಬಾರ ಓಣಿಯಲ್ಲಿ ಸೂಕ್ತ ಚರಂಡಿ, ಸಿಸಿ ರಸ್ತೆ ಇಲ್ಲದ್ದಕ್ಕೆ ಕೊಳಚೆ ನೀರು ಹರಿದು ಇಡೀ ಬಡಾವಣೆ ಗಲೀಜಾಗಿದೆ.
ಸ್ವಚ್ಛತೆಗೆ ಸರ್ಕಾರ ಕೋಟ್ಯಂತರ ರೂ. ವ್ಯಯಿಸಿ ಹಲವಾರು ಯೋಜನೆ ಜಾರಿಗೊಳಿಸಿದೆ. ಆದರೆ, ಕುಂಬಾರ ಓಣಿ ಮೂಲಸೌಕರ್ಯದಿಂದ ವಂಚಿತವಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಬಡಾವಣೆ ರಸ್ತೆಯಲ್ಲಿ ಗಲೀಜು ನೀರು ಹರಿದು ಮಡುಗಟ್ಟಿ ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
500ಕ್ಕೂ ಹೆಚ್ಚು ಮನೆಗಳಿರುವ ಬಡಾವಣೆಯಲ್ಲಿ ಚರಂಡಿ ನಿರ್ಮಾಣ, ಬೀದಿ ದೀಪ, ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಸೇರಿ ವಿವಿಧ ಮೂಲಸೌಲಭ್ಯ ಕಲ್ಪಿಸುವಂತೆ ಪುರಸಭೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಜಾಣಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದಾರೆ.
ಗಲೀಜು ನೀರಿನಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಪುರಸಭೆ ಅಧಿಕಾರಿಗಳು ಶೀಘ್ರ ಸಮಸ್ಯೆ ಬಗೆಹರಿಸಬೇಕು. ರಸ್ತೆಯಲ್ಲಿ ನಿಂತಿರುವ ಗಲೀಜು ನೀರಿನಲ್ಲಿ ಜನರು ಹಾಗೂ ವಾಹನಗಳ ಸಂಚಾರಕ್ಕೆ ಹರಸಾಹಸ ಮಾಡುವ ಸ್ಥಿತಿ ಇದೆ. ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಮಕ್ಕಳು, ವದ್ಧರು ಬಿದ್ದು ಗಾಯಗೊಂಡಿದ್ದು, ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಬೇಕು ಎಂದು ಬಡಾವಣೆ ನಿವಾಸಿಗಳು ಒತ್ತಾಯಿಸಿದ್ದಾರೆ.