

ಶಿರಹಟ್ಟಿ: ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು ಬೇರೂರಿವೆ. ಇದು ಭಾರತ ಕಂಡ ಅತ್ಯುತ್ತಮ ಸಾಧನೆಗಳಲ್ಲಿ ಒಂದಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದಲ್ಲಿ ಸೋಮವಾರ ಜ. ಫಕೀರೇಶ್ವರ ಮಠದಿಂದ ಆರಂಭಗೊಂಡ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನರಾಮ್ ಅವರ ಭಾವಚಿತ್ರಗಳ ಭವ್ಯ ಮೆರವಣಿಗೆಗೆ ಚಾಲನೆ ಹಾಗೂ ಅಂಬೇಡ್ಕರ್ ವೃತ್ತ ಹಾಗೂ ನೆಹರು ವೃತ್ತದಲ್ಲಿನ ಅವರ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿ ಅವರು ಮಾತನಾಡಿದರು.
ತಾಲೂಕಾಡಳಿತ, ತಾಪಂ, ಪಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಶಿರಹಟ್ಟಿ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಮಂತ್ರಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಪ್ರತಿಯೊಬ್ಬನಿಗೂ ಅಂಬೇಡ್ಕರ್ ಅವರು ಸಮಾನತೆಯ ಹಕ್ಕನ್ನು ಕರುಣಿಸಿದ್ದಾರೆ ಎಂದರು.
ಹನುಮಂತಪ್ಪ ದೊಡ್ಡಮನಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಭಾರತೀಯ ಸಂವಿಧಾನದ ಶಿಲ್ಪಿ, ದಲಿತ ಮತ್ತು ಹಿಂದುಳಿದ ವರ್ಗದ ಹಕ್ಕುಗಳ ಹರಿಕಾರರಾಗಿದ್ದ ಮಹಾನ್ ನಾಯಕರು. ಡಾ. ಬಾಬು ಜಗಜೀವನರಾಂ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಮಂತ್ರಿ, ದೇಶದ ಕೃಷಿ ಅಭಿವೃದ್ಧಿಗೆ ಮಹತ್ವಪೂರ್ಣ ಕೊಡುಗೆ ನೀಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಂವಿಧಾನ ರೂಪಿಸದೇ ಇದ್ದರೆ, ದೇಶ ಅರಾಜಕತೆಗೆ ತುತ್ತಾಗುತ್ತಿತ್ತು. ಅವರ ದೂರದೃಷ್ಟಿಯೇ ದಲಿತರು ಮತ್ತು ಹಿಂದುಳಿದವರಿಗೆ ನ್ಯಾಯ ನೀಡಿದೆ ಎಂದು ಅಭಿಪ್ರಾಯಪಟ್ಟರು.
ತಹಸೀಲ್ದಾರ್ ಅನೀಲ ಬಡಿಗೇರ, ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ್ ಮಾಗಡಿ, ರಾಮಣ್ಣ ದೊಡ್ಡಮನಿ, ಸಿಪಿಐ ನಾಗರಾಜ ಮಾಡ್ಡಳ್ಳಿ, ಡಿ ಕೆ. ಹೊನ್ನಪ್ಪನವರ, ಜಾನು ಲಮಾಣಿ, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲ ಲಮಾಣಿ, ಹೊನ್ನಪ್ಪ ಶಿರಹಟ್ಟಿ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ನಾಗರಾಜ ಲಕ್ಕುಂಡಿ, ಎಂ.ಕೆ. ಲಮಾಣಿ, ಜಾನು ಲಮಾಣಿ, ಫಕೀರೇಶ ರಟ್ಟಿಹಳ್ಳಿ, ಸಂದೀಪ ಕಪ್ಪತ್ತನವರ, ನಂದಾ ಪಲ್ಲೇದ, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಇತರರಿದ್ದರು.