ಜಿಲ್ಲಾಧಿಕಾರಿಗೆ ಮನೆ ಕಳೆದುಕೊಂಡು ಸಂತ್ರಸ್ತರ ಮನವಿ

IMG_20250704_195736
Published on

ಕೊಳ್ಳೇಗಾಲ: ಪಟ್ಟಣದ ಎಪಿಎಂಸಿ ರಸ್ತೆಯಲ್ಲಿರುವ ಮರಡಿಗುಡ್ಡ ತಪ್ಪಲಿನಲ್ಲಿರುವ ಸರ್ಕಾರಿ ಸ್ಥಳದಲ್ಲಿ ಮನೆ ಕಟ್ಟಿಕೊಂಡು ವಾಸವಿದ್ದವರಿಗೆ ತೆರವು ಮಾಡಲು ತಾಲೂಕು 10 ದಿನ ಗಡುವು ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ತರು ಶುಕ್ರವಾರ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ವಾಸ ಮಾಡಲು ಅವಕಾಶ ನೀಡಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡರು.

ಪಟ್ಟಣದ ಎಪಿಎಂಸಿ ರಸ್ತೆಯಲ್ಲಿ ಮರಡಿಗುಡ್ಡಕ್ಕೆ ಸೇರಿದ 0.37 ಸೆಂಟ್ ಸ್ಥಳದಲ್ಲಿ ಅಕ್ರಮವಾಗಿ ಸುಮಾರು 10 ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರನ್ನು ತೆರವುಗೊಳಿಸಿ ಎಂದು ಲೋಕಾಯುಕ್ತ ಆದೇಶದ ಹಿನ್ನೆಲೆಯಲ್ಲಿ ಬುಧವಾರ ತಹಸೀಲ್ದಾರ್ ಬಸವರಾಜು ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತರು ಮತ್ತು ಪೊಲೀಸ್ ಇಲಾಖೆ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ್ದು ಮನೆಗಳನ್ನು ತೆರವುಗೊಳಿಸಲು ತಹಸೀಲ್ದಾರ್ 10 ದಿನಗಳ ಗಡುವು ನೀಡಿದ್ದರು. ಈ ಹಿನ್ನೆಲೆ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು.

ಈ ವಿಚಾರವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪನಾಗ್ ಅವರನ್ನು ಸಂತ್ರಸ್ತರು ಭೇಟಿ ಮಾಡಿ ನಾವು ಸುಮಾರು 40 ವರ್ಷಗಳಿಂದಲೂ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದೇವೆ. ನೀರಿನ ಹಣ, ವಿದ್ಯುತ್ ಬಳಕೆ ಹಣವನ್ನು ಕಟ್ಟಿಕೊಂಡು ನಾವು ಜೀವನ ಸಾಗಿಸುತ್ತಿದ್ದೇವೆ. ನಮಗೆ ಬೇರೆ ಮನೆ ಇಲ್ಲ, ಈಗಿರುವ ಮನೆಗಳಲ್ಲಿ ನಾವು ವಾಸ ಮಾಡುತ್ತಿದ್ದೇವೆ. ನಮ್ಮನ್ನು ಒಕ್ಕೊಲೆಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಸರ್ಕಾರಿ ಸ್ಥಳದಲ್ಲಿ ಅಂಗಡಿ ಮತ್ತು ಮನೆಯನ್ನು ನಿರ್ಮಾಣ ಮಾಡಿಕೊಂಡು ಬೇರೆಯವರಿಗೆ ಬಾಡಿಗೆ ನೀಡುವುದು ತಪ್ಪಲ್ಲವೇ ಎಂದು ಜಿಲ್ಲಾಧಿಕಾರಿ ಶಿಲ್ಪನಾಗ್ ಪ್ರಶ್ನಿಸಿದರು.

ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಆರ್‌ಟಿಐ ಕಾರ್ಯಕರ್ತರೊಬ್ಬರು ಲೋಕಾಯುಕ್ತರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿರುವುದರಿಂದ ಅಧಿಕಾರಿಗಳು ತೆರವುಗೊಳಿಸಲು ಮುಂದಾಗಿದ್ದಾರೆ. 6 ತಿಂಗಳ ಹಿಂದೆ ತೆರವುಗೊಳಿಸಲು ಮುಂದಾದಾಗ ಅಧಿಕಾರಿಗಳಿಗೆ ಸ್ವಲ್ಪ ದಿನ ನಿವಾಸಿಗಳಿಗೆ ಕಾಲಾವಕಾಶ ನೀಡಿ ಎಂದು ಹೇಳಿದ್ದೆ. ಈಗ ಕಾನೂನಿನಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ಸಾಧ್ಯವಾದರೆ ನಾನು ಕಾನೂನಿನಡಿಯಲ್ಲಿ ನಿಮಗೆ ಸಹಾಯ ಮಾಡಲು ಶ್ರಮಿಸುತ್ತೇನೆ. ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ಸಾಧ್ಯವಾಗದೆ ಹೋದರೆ ಬೇರೆ ಪಯಾರ್ಯ ವ್ಯವಸ್ಥೆ ಮಾಡುತ್ತೇನೆಂದು ಭರವಸೆ ನೀಡಿದರು.

ಕಾಮಗಾರಿ ವೀಕ್ಷಣೆ:

ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಮೈದಾನದಲ್ಲಿ ಕ್ರೀಡಾ ಇಲಾಖೆ ವತಿಯಿಂದ ನಡೆಯುತ್ತಿರುವ ಬಾಸ್ಕೆಟ್ ಬಾಲ್ ಕಾಮಗಾರಿ ಜಿಮ್ ಕಟ್ಟಡವನ್ನು ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ವೀಕ್ಷಿಸಿದರು. ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಒಳಾಂಗಣ ಕ್ರೀಡಾಂಗಣ ಅರ್ಧಕ್ಕೆ ನಿಂತಿದೆ. ಮುಂದೆ ಪೂರ್ಣ ಕಾಮಗಾರಿಗೆ ಕ್ರಮವಹಿಸುತ್ತೇನೆ. ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ಹಿಂದೆ ನಗರಸಭೆ ವತಿಯಿಂದ ಜಿಮ್ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಇನ್ನೂ ಪೂರ್ಣವಾಗಿಲ್ಲ. ಇದನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದರೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಿ ಮಾಡಿ ಇಲ್ಲಿರುವ ಜಿಮ್ ಪರಿಕರಗಳು ಸಾರ್ವಜನಿಕರ ಉಪ ಯೋಗಕ್ಕೆ ಬರುವಂತೆ ಕ್ರಮವಹಿಸಲಾಗುತ್ತದೆ ಎಂದರು.

ನಗರಸಭೆ ಅಧ್ಯಕ್ಷೆ ರೇಖಾ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜು, ಪೌರಾಯುಕ್ತ ರಮೇಶ್, ಕ್ರೀಡಾ ಇಲಾಖೆ ಅಧಿಕಾರಿ ಸುರೇಶ್ ಹೇಳಿದಂತೆ ಅನೇಕ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net