

ಶಿಗ್ಗಾಂವಿ: ರೈತರ ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಆಗ್ರಹಿಸಿ ತಾಲೂಕಿನ ಹುಲಸೋಗಿ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಅಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಈಗಾಗಲೇ ಶೇ. 70ರಷ್ಟು ಮುಂಗಾರು ಹಂಗಾಮಿನ ಬಿತ್ತನೆ ಆಗಿದೆ. ಮುಂಗಾರು ಮಳೆ ಆಗದಿರುವುದರಿಂದ ಬಿತ್ತನೆ ಮಾಡಿದ ಬೆಳೆಗಳು ಮೊಳಕೆಯ ಹಂತದಲ್ಲೇ ಬಾಡುತ್ತಿದೆ. ಕಳೆದ ವಾರ ಮಳೆ ಸುರಿದಿದ್ದರಿಂದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಖರೀದಿಸಿ ಬಿತ್ತನೆ ಮಾಡಲಾಗಿದೆ. ಸದ್ಯ ಮಳೆಯಾಗದಿರುವುದರಿಂದ ಮೊಳಕೆಯ ಹಂತದಲ್ಲಿರುವ ಬೆಳೆಗಳು ಬಿಸಿಲಿನ ತಾಪಕ್ಕೆ ಕಮರುತ್ತಿವೆ. ಸದ್ಯ ಹೆಸ್ಕಾಂ ಪೂರೈಸುತ್ತಿರುವ ಏಳು ತಾಸು ವಿದ್ಯುತ್ ಸಮರ್ಪಕವಾಗಿಲ್ಲ. ಹೆಚ್ಚುವರಿ ಒಂದು ಗಂಟೆ ಕಾಲ ಸಮರ್ಪಕ ವಿದ್ಯುತ್ ಪೂರೈಸಬೇಕು. ಇದರಿಂದ ಕೊಳವೆ ಬಾವಿಗಳ ನೀರಿನಿಂದ ಬೆಳೆ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಸತತ ಎರಡು ವರ್ಷಗಳಿಂದ ಅತಿವೃಷ್ಟಿಯಿಂದ ಈ ಭಾಗದ ರೈತರು ಮುಂಗಾರಿನ ಬೆಳೆ ಕಾಣದಂತಾಗಿದೆ. ಆದ್ದರಿಂದ ಹೆಚ್ಚಿಗೆ ವಿದ್ಯುತ್ ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹೆಸ್ಕಾಂ ಸಹಾಯಕ ಇಂಜಿನಿಯರ್ ವಿನುತಾ ಎಸ್. ಅವರು ಮನವಿ ಸ್ವೀಕರಿಸಿದರು. ಭೀಮಣ್ಣ ಕೋಕಾಟೆ, ರಾಜಪ್ಪ ಕೊಂಡಾಯಿ, ಗಂಗಾಧರ ಜಾಧವ, ಭೀಮಸಿ ಶಿಂಧೆ, ಮಹೇಶ ಕೋಕಾಟೆ ಪ್ರಕಾಶ ಕೊಕಾಟೆ, ಮಂಜುನಾಥ ಸುಲ್ತಾನಜಿ, ಮೃತ್ಯುಂಜಯ ಕಂಬಾಳಿಮಠ, ಗೂಳಪ್ಪ ಸೊಲಬಕ್ಕನವರ, ಪರಸಪ್ಪ ಗಾಜುನವರ, ಶಂಕರ ಅರ್ಕಸಾಲಿ, ನಾಮದೇವ ಅಂಚಲಕರ, ಸಿದ್ದಪ್ಪ ಶರೆಕಾರ, ಈರಣ್ಣ ಹೈಬತ್ತಿ ಸೇರಿದಂತೆ ಅನೇಕ ರೈತರಿದ್ದರು.
ಮಳೆ ಗಾಳಿಯಿಂದ ಕೆಲವೆಡೆ ವಿದ್ಯುತ್ ಕಂಬಗಳು ಬಾಗಿ ತಂತಿಗಳು ನೇತಾಡುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ನಮ್ಮ ಸಿಬ್ಬಂದಿ ದುರಸ್ತಿ ಕಾರ್ಯನಿರ್ವಹಿಸುತ್ತಿದ್ದಾರೆ. ದುರಸ್ತಿ ಸಮಯದಲ್ಲಿ ಕಡಿತಗೊಳಿಸಿದ ವಿದ್ಯುತ್ನ್ನು ಹೆಚ್ಚುವರಿಯಾಗಿ ನೀಡಿದ್ದೇವೆ. ರೈತರು ಕೇಳಿದ ಒಂದು ಗಂಟೆ ಹೆಚ್ಚಿನ ವಿದ್ಯುತನ್ನು ಸರ್ಕಾರದ ಸೂಚನೆ ಇಲ್ಲದೆ ನೀಡಲು ಸಾಧ್ಯವಿಲ್ಲ. ಸರ್ಕಾರ ಹೆಚ್ಚುವರಿ ವಿದ್ಯುತ್ ನೀಡಲು ಸೂಚಿಸಿದರೆ, ನಾವು ರೈತರಿಗೆ ಹೆಚ್ಚಿನ ವಿದ್ಯುತ್ ಕೊಡಬಹುದಾಗಿದೆ. | ಸಿ.ಬಿ. ಹೊಸಮನಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ