ಪಡಿತರ ಲೆಕ್ಕತಪ್ಪುವ ಆತಂಕ, ಯೋಜನೆ ದುರ್ಬಳಕೆ ಸಾಧ್ಯತೆ!, ಒಟಿಪಿ ಬದಲು ಸಹಿ ತಂದ ಜೀತಿ

download
Published on

ಶಿವರಾಜ ಎಂ. ಬೆಂಗಳೂರು

ಮೊಬೈಲ್ ಒಟಿಪಿ ಸಹಾಯವಿಲ್ಲದೆ ಪಡಿತರ ನೀಡುವಂತೆ ಹೊರಡಿಸಿರುವ ಸರ್ಕಾರದ ಆದೇಶ ಈಗ ಗ್ರಾಮಾಂತರ ಜಿಲ್ಲೆಯ ಆಹಾರ ಸರಬರಾಜು ಇಲಾಖೆಗೆ ಮುಳುವಾಗಿದೆ. ಕೇವಲ ಸಹಿ ಪಡೆದು ವಿತರಿಸುತ್ತಿರುವುದರಿಂದ ಯೋಜನೆ ದುರ್ಬಳಕೆಯಾಗುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೌದು! ಕರೊನಾ ಹಿನ್ನೆಲೆಯಲ್ಲಿ 2 ತಿಂಗಳ ಪಡಿತರ ವಿತರಣೆಗೆ ಆದೇಶ ನೀಡಿದ್ದ ಸರ್ಕಾರ ಲಾಕ್‌ಡೌನ್ ಮುಗಿಯುವವರೆಗೆ ಬಯೋಮೆಟ್ರಿಕ್ ನಿಷೇಧಿಸಿ, ಮೊಬೈಲ್ ಒಟಿಪಿ ಆಧರಿಸಿ ಪಡಿತರ ವಿತರಿಸುವಂತೆ ಸೂಚಿಸಿತ್ತು. ಈಗ ಮೊಬೈಲ್ ಒಟಿಪಿಯೂ ಬೇಡ, ಕೇವಲ ಸಹಿ ಪಡೆದು ವಿತರಿಸುವಂತೆ ಹೊಸ ಅಧಿಸೂಚನೆ ಹೊರಡಿಸಿದೆ. ಆದರೆ ಇದರಿಂದ ಇಲಾಖೆಗೆ ಲಾನುಭವಿಗಳ ಸ್ಪಷ್ಟ ಅಂಕಿ ಅಂಶ ಸಂಗ್ರಹಕ್ಕೆ ತೊಡಕಾಗಿದೆ. ಯಾರದ್ದೋ ಪಡಿತರ ಚೀಟಿ ತಂದು ಮತ್ಯಾರೋ ಪಡಿತರ ಪಡೆಯುತ್ತಿದ್ದಾರೆ. ಕೆಲವೊಂದು ಕಡೆಗಳಲ್ಲಿ ಪಡಿತರ ಪಡೆದವರೇ ಕುಟುಂಬದ ಬೇರೆ ಬೇರೆ ವ್ಯಕ್ತಿಗಳನ್ನು ಕಳುಹಿಸಿ ಪಡೆಯುವ ಯತ್ನ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಮೂರ‌್ನಾಲ್ಕು ದಿನ ಸಾಕಿತ್ತು: ಸರ್ಕಾರದ ಆದೇಶದಂತೆ ಈಗಾಗಲೇ ಜಿಲ್ಲೆಯ 369 ನ್ಯಾಯಬೆಲೆ ಅಂಗಡಿಗಳಿಂದಲೂ ಪಡಿತರ ವಿತರಣೆ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಜಿಲ್ಲೆಯ 2.42 ಲಕ್ಷ ಪಡಿತರ ಕಾರ್ಡ್‌ಗಳ ಪೈಕಿ 53 ಸಾವಿರ ಕಾರ್ಡ್‌ದಾರರಿಗೆ 2 ತಿಂಗಳ ಮುಂಗಡ ಪಡಿತರ ವಿತರಿಸಲಾಗಿದೆ. ಒಟಿಪಿ ಆಧರಿಸಿ ಪಡಿತರ ವಿತರಣೆಯಿಂದ ಸಮರ್ಪಕ ಅಂಕಿಅಂಶ ದಾಖಲಾಗಿದೆ. ಇನ್ನೂ ಮೂರ‌್ನಾಲ್ಕು ದಿನ ಕಾಲಾವಕಾಶ ನೀಡಿದ್ದರೆ ಬಾಕಿ ಕಾರ್ಡ್‌ದಾರರಿಗೂ ಪಡಿತರ ವಿತರಣೆ ಸಾಧ್ಯವಾಗುತ್ತಿತ್ತು. ಅಷ್ಟರೊಳಗೆ ಈ ಆದೇಶ ಬಂದಿದೆ. ಸರ್ಕಾರದ ಆದೇಶ ಪಾಲಿಸಲೇಬೇಕೆನ್ನುವ ಜತೆಗೆ ಸಮರ್ಪಕ ಅಂಕಿ ಅಂಶ ದಾಖಲಿಸಲೂ ಬೇಕು. ಈ ಒತ್ತಡದಲ್ಲಿ ಪಡಿತರ ವಿತರಣೆಯಲ್ಲಿ ಗೊಂದಲ ಉಂಟಾಗುವ ಆತಂಕವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗೋಧಿ ಪಡೆಯಲು ಹಿಂದೇಟು: ಒಂದೆಡೆ ಕೂಲಿಕಾರ್ಮಿಕರು ಸಿಗದೆ ಪಡಿತರ ಸಾಗಣೆಗೆ ಪರದಾಡುತ್ತಿರುವ ಅಧಿಕಾರಿಗಳು ಗೋಧಿ ಸಂಗ್ರಹಿಸಲು ಚೀಲಗಳ ಕೊರತೆಯನ್ನೂ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಚೀಲಗಳಿಲ್ಲದೆ ಈಗಾಗಲೇ ಬಳಸಿದ ರೆಡಿಮೆಡ್ ಗೋಧಿಹಿಟ್ಟಿನ ಚೀಲಗಳಲ್ಲಿ ಪ್ಯಾಕ್ ಮಾಡುತ್ತಿದ್ದಾರೆ. ಅಂಥ ಚೀಲಗಳಲ್ಲಿ ಗೋಧಿ ಹಿಟ್ಟು ಅಂಟಿಕೊಂಡಿರುತ್ತದೆ. ಗೋಧಿ ವಿತರಣೆ ವೇಳೆ ಗೋಧಿ ಹಿಟ್ಟು ಸಹ ಬರುತ್ತದೆ. ಕಳಪೆ ಗೋಧಿ ವಿತರಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತಪಡಿಸುತ್ತಿರುವ ಸಾರ್ವಜನಿಕರು ಗೋಧಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಡಿತರ ವಿತರಣೆ ವಿವರ: ಅಂತ್ಯೋದಯ ಅನ್ನ ಪಡಿತರ ಚೀಟಿದಾರರಿಗೆ (ಎಎವೈ) 70 ಕೆಜಿ ಉಚಿತ ಅಕ್ಕಿ, ಬಿಪಿಎಲ್ ಪಡಿತರ ಚೀಟಿದಾರರಿಗೆ ಕುಟುಂಬದ ಒಬ್ಬ ಸದಸ್ಯನಿಗೆ 1ತಿಂಗಳಿಗೆ 5 ಕೆಜಿಯಂತೆ ಎರಡು ತಿಂಗಳಿಗೆ 10 ಕೆಜಿ ವಿತರಿಸಲಾಗುವುದು. ಪ್ರತಿ ಬಿಪಿಎಲ್ ಪಡಿತರ ಚೀಟಿಗೆ 1 ತಿಂಗಳಿಗೆ 2 ಕೆಜಿ ಗೋಧಿಯಂತೆ 2 ತಿಂಗಳಿಗೆ 4 ಕೆಜಿ ಉಚಿತ ಗೋಧಿ, ಎಪಿಎಲ್ ಪಡಿತರ ಚೀಟಿದಾರರಿಗೆ 1 ತಿಂಗಳಿಗೆ 5ಕೆಜಿಯಂತೆ 2 ತಿಂಗಳಿಗೆ 10 ಕೆಜಿ ಅಕ್ಕಿ.(1 ಕೆಜಿಗೆ 15 ರೂ.ದರ ನಿಗದಿ), ಇಬ್ಬರು ಅಥವಾ ಅದಕ್ಕಿಂತ ಎಷ್ಟೇ ಜನರಿದ್ದರೂ ತಿಂಗಳಿಗೆ 10 ಕೆಜಿ 2 ತಿಂಗಳಿಗೆ 20 ಕೆಜಿ ಪ್ರತಿ ಕೆಜಿಗೆ 15 ರೂ. ದರ ನಿಗದಿಯಾಗಿರುತ್ತದೆ.

ಬಯೋಮೆಟ್ರಿಕ್ ನಿಷೇಧಿಸಿದಾಗ ಮೊಬೈಲ್ ಒಟಿಪಿ ಆಧಾರದ ಮೇಲೆ ಪಡಿತರ ವಿತರಣೆ ಪ್ರಕ್ರಿಯೆ ಸಮರ್ಪಕವಾಗಿತ್ತು. ಈಗ ಅದನ್ನು ನಿಲ್ಲಿಸಿರುವುದರಿಂದ ಪಡಿತರ ವಿತರಣೆ ಲೆಕ್ಕ ದಾಖಲಿಸುವುದು ಕಷ್ಟಸಾಧ್ಯವಾಗಿದೆ. ಹೆಸರೇಳಲಿಚ್ಚಿಸದ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net