ಸಕಲ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿದೆ ಉತ್ತರ

13 NRD 2
Published on

ನರಗುಂದ/ಶಿರೋಳ: ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಭಗವದ್ಗೀತೆಯಲ್ಲಿದೆ. ಮನುಷ್ಯನ ಮನಸಿನ ವೇದನೆಗಳು ಮತ್ತು ಪ್ರಶ್ನೆಗಳಿಗೆ ಎಲ್ಲಿಯೂ ಹೋಗಬೇಕಿಲ್ಲ. ಭಗವದ್ಗೀತೆ ಓದಿದರೆ ಸಾಕು ಪ್ರತಿಯೊಂದಕ್ಕೂ ಉತ್ತರ ದೊರೆಯುತ್ತದೆ ಎಂದು ಶಿರೋಳ ಯಚ್ಚರಸ್ವಾಮಿ ಗವಿಮಠದ ಪೀಠಾಧಿಪತಿ ಶ್ರೀಅಭಿನವ ಯಚ್ಚರ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಶಿರೋಳ ಗ್ರಾಮದ ಶ್ರೀಯಚ್ಚರಸ್ವಾಮಿ ಗವಿಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಮಠದ 16ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಗವದ್ಗೀತೆ ಆತ್ಮ ಜ್ಞಾನದ ಕಾನೂನು ಇದ್ದಂತೆ. ಅದರಲ್ಲಿರುವ ಆದರ್ಶಗಳನ್ನು ಕೈಲಾದಷ್ಟು ಮಟ್ಟಿಗೆ ಅಳವಡಿಸಿಕೊಂಡು ಸಮಾಜದ ಸತ್ಪ್ರತೆಗಳಾಗಿ, ಸಮನ್ವಯದಿಂದ ಸಹಬಾಳ್ವೆಯ ಜೀವನ ನಡೆಸಬೇಕಿದೆ ಎಂದು ಹಾರೈಸಿದರು.

ಆಧ್ಯಾತ್ಮಿಕ ಚಿಂತಕ ಪ್ರಭಾಕರ ಉಳ್ಳಾಗಡ್ಡಿ ಮಾತನಾಡಿ, ಭಗವದ್ಗೀತೆಯು ನೇರವಾಗಿ ಭಗವಂತನ ವಾಣಿಯಿಂದ ಬಂದಿದೆ. ಜೀವನವೆಂಬ ಯುದ್ಧದಲ್ಲಿ ಗೆಲ್ಲುವ ಬಗೆಯನ್ನು ಶ್ರೀಕೃಷ್ಣನು ಇದರಲ್ಲಿ ತಿಳಿಸಿರುವುದರಿಂದ ಪ್ರತಿಯೊಬ್ಬರೂ ಭಗವದ್ಗೀತೆ ಸಾರ ಅರಿತುಕೊಂಡು ನಿತ್ಯವೂ ಪಠಿಸಬೇಕು ಎಂದು ತಿಳಿಸಿದರು.

ಖಾನಾಪುರದ ಪ್ರಗತಿಪರ ರೈತ ವೆಂಕನಗೌಡ ಕಗಧಾಳ, ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ನಾಗನಗೌಡ ಕಗಧಾಳ, ಉಮೇಶಗೌಡ ಪಾಟೀಲ, ಶಿವಾನುಭವ ಸೇವೆಗೈದ ಬೆಂಗಳೂರಿನ ಇಂಜಿನಿಯರ್ ರಾಮಕೃಷ್ಣ ಗಂಗೋಜಿ, ಅಸುಂಡಿಯ ವೀರಯೋಧ ರಾಜಶೇಖರ ಏಳಝರಿ ಇತರರಿದ್ದರು. ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಪಾಂಡುರಂಗ ಪತ್ತಾರ, ಸುನೀಲ ಪತ್ತಾರ ಅವರಿಂದ ಸಂಗೀತ ಸೇವೆ ಜರುಗಿತು. ಸುನಿಲ್, ಮುತ್ತಣ್ಣ, ಗುರುನಾಥ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net