

ಗೋಣಿಕೊಪ್ಪ: ಬೊಟ್ಟಿಯತ್ ನಾಡ್ ಶ್ರೀ ಈಶ್ವರ ದೇವರ ವಾರ್ಷಿಕ ಉತ್ಸವ ಪ್ರಯುಕ್ತ ಸೋಮವಾರ ಎತ್ತು ಪೋರಾಟ ನಡೆಯಿತು.
ಕುಂದಾ ಮುಗುಟಗೇರಿ ಸಮೀಪದಲ್ಲಿರುವ ‘ನಾಡ್ ದೇವಸ್ಥಾನ’ ಎಂದು ಖ್ಯಾತಿ ಪಡೆದಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಕುಂದಾ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರವತೋಕ್ಲು ಹಾಗೂ ಈಚೂರು ಊರುಗಳ ತಕ್ಕಮುಖ್ಯಸ್ಥರು ಸೇರಿದಂತೆ ಶ್ರೀ ಈಶ್ವರ ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ದವಸ ಧಾನ್ಯಗಳನ್ನು ಎತ್ತು ಪೋರಾಟದ ಮೂಲಕ ತರಲಾಯಿತು.
ದೇವಸ್ಥಾನದ ಮುಖ್ಯ ಅರ್ಚಕರು ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಆರು ಊರುಗಳಿಂದ ತರಲಾಗಿದ್ದ ದವಸ ಧಾನ್ಯಗಳನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು. ನಂತರ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಚಂಡೆವಾದ್ಯಕ್ಕೆ ಹೆಜ್ಜೆ ಹಾಕಲಾಯಿತು. ನಂತರ ಅಲಂಕಾರ ಪೂಜೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಮಂಗಳವಾರ ದೇವರ ಅವಭೃತ ಸ್ನಾನ ನಡೆಯಲಿದೆ.