20 ವರ್ಷ ಕಳೆದರೂ ಈಡೇರದ ‘ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ರಚನೆ ಘೋಷಣೆ

download
Published on

ಆರ್.ಕೃಷ್ಣ ಮೈಸೂರು

ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾಗಿ ‘ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ರಚನೆ ಮಾಡುವ ಸರ್ಕಾರದ ಘೋಷಣೆ 20 ವರ್ಷ ಕಳೆದರೂ ಇನ್ನೂ ಈಡೇರಿಲ್ಲ.

ತನ್ನದೇ ಆಡಳಿತ ಮಂಡಳಿಯನ್ನು ಹೊಂದಿ ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತೆ ಬೆಂಗಳೂರಿನ ಪೀಣ್ಯಾ, ಮೈಸೂರಿನ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವುದಾಗಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರಲ್ಲದೆ ಅದಕ್ಕಾಗಿ 100 ಕೋಟಿ ರೂ. ಅನ್ನು ಕಾಯ್ದರಿಸಿದ್ದರು.

ಆದರೆ ವರ್ಷಗಳು ಉರುಳಿದರೂ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯನ್ನು ಇನ್ನೂ ಅನುಷ್ಠಾನಗೊಳಿಸಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಐಎಎಸ್ ಅಧಿಕಾರಿ ಅರವಿಂದ್ ಜಾಧವ್ ಅವರು ಕೈಗಾರಿಕಾ ಇಲಾಖೆ ನಿರ್ದೇಶಕರಾಗಿದ್ದಾಗ 1988ರಲ್ಲಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಕುರಿತು ಮೊದಲ ಸಭೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.

ಅಲ್ಲದೆ ಇದಕ್ಕೆ ಪೂರಕವಾಗಿ 2003ರ ಬಜೆಟ್‌ನಲ್ಲಿ ಪ್ರಾಧಿಕಾರ ರಚನೆ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿತ್ತಲ್ಲದೆ ಅದೇ ವರ್ಷ ರಾಜ್ಯ ಸರ್ಕಾರ ಜಾರಿಗೊಳಿಸಿದ ಕರ್ನಾಟಕ ಪೌರಸಭೆ ಕಾಯ್ದೆ 1964ಕ್ಕೆ ತಿದ್ದುಪಡಿ (ಸೇರ್ಪಡೆ) ಮಾಡಿ (ಸೆಕ್ಷನ್ 364)‘ ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ರಚನೆ ಮಾಡುವ ಗೆಜೆಟ್ ಪ್ರಕಟಣೆಯನ್ನೂ ಹೊರಡಿಸಲಾಗಿತ್ತು. ಆದರೆ 2020-2025ರ ಕೈಗಾರಿಕಾ ನೀತಿ ಹಾಗೂ 2021-2022ರ ಆಯವ್ಯಯದಲ್ಲಿಯೂ ಮತ್ತೆ ಮೈಸೂರಿನ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡಂತೆ ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡುವ ಪ್ರಸ್ತಾಪ ಮಾಡಲಾಗಿದೆ.

ಇದರ ಮುಂದುವರಿದ ಭಾಗವಾಗಿ ಮೈಸೂರು ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆಯ ಅನುಮೋದನೆಯೊಂದಿಗೆ ಕೈಗಾರಿಕಾ ಇಲಾಖೆಯಿಂದ ಈಗ ನಗರಾಭಿವೃದ್ಧಿ ಇಲಾಖೆಗೆ ಈ ಕುರಿತು ಪ್ರಸ್ತಾಪ ಕಳುಹಿಸಲಾದೆ. ಆದರೂ ಪ್ರಾಧಿಕಾರ ರಚನೆ ಕುರಿತು ಸರ್ಕಾರದಿಂದ ಇನ್ನೂ ಸ್ಪಷ್ಟ ನಿರ್ಧಾರ ಹೊರ ಬಂದಿಲ್ಲ ಎನ್ನುವ ಬೇಸರವನ್ನು ಕೈಗಾರಿಕೋದ್ಯಮಿಗಳು ಹೊರ ಹಾಕುತ್ತಾರೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರ ನೀಡುವುದಾಗಿ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ.

ಪ್ರಾಧಿಕಾರ ರಚನೆಯಿಂದಾಗುವ ಲಾಭ:

ಕೈಗಾರಿಕಾ ಪಟ್ಟಣ ಪ್ರಾಧಿಕಾರದಿಂದ ಕೈಗಾರಿಕೆಗಳ ಮೂಲಸೌಲಭ್ಯ ಅಭಿವೃದ್ಧಿಗೆ ಹಾಗೂ ಬೆಳವಣಿಗೆಗೆ ಪೂರಕ ಎನ್ನಲಾಗುತ್ತಿದೆ. ಕೈಗಾರಿಕೆಗಳಿಂದ ಬರುವ ದೊಡ್ಡ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸುವ ಸ್ಥಳೀಯ ಸಂಸ್ಥೆಗಳು ಆ ಹಣವನ್ನು ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ಬಳಸದೆ ತನ್ನ ವ್ಯಾಪ್ತಿಯ ಬೇರೆ ಜನವಸತಿ ಇರುವ ಬಡಾವಣೆಗಳಿಗೆ ವಿನಿಯೋಗಿಸಿಕೊಂಡು ಬರುತ್ತಿದೆ.

ಹೀಗಾಗಿ ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆ, ಚರಂಡಿ, ಬೀದಿದೀಪ, ನೀರು, ತ್ಯಾಜ್ಯ ವಿಲೇವಾರಿ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳು ಇಲ್ಲದೆ ಸೊರಗುತ್ತಿವೆ. ಆದ್ದರಿಂದ ಪ್ರಾಧಿಕಾರ ರಚನೆ ಮಾಡಿದರೆ ಕೈಗಾರಿಕೆಗಳಿಂದ ಸಂಗ್ರಹವಾಗುವ ತೆರಿಗೆಯಲ್ಲಿ ಶೇ.30ರಷ್ಟು ಹಣವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಉಳಿದ ಶೇ.70ರಷ್ಟು ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ಬಳಸಿಕೊಳ್ಳಲು ಅವಕಾಶವಿದೆ.

ಪ್ರಾಧಿಕಾರದಲ್ಲಿ ಕೈಗಾರಿಕೋದ್ಯಮಿಗಳೇ ಚುನಾವಣೆ ಮೂಲಕ ಆಯ್ಕೆ ಆಗುವುದರಿಂದ ಅವರಿಗೆ ಅಗತ್ಯ ಇರುವ ಮೂಲಸೌಲಭ್ಯವನ್ನು ಅವರೇ ಕಲ್ಪಿಸಿಕೊಳ್ಳಲು ಅವಕಾಶವಿದೆ. ಐಎಎಸ್ ಅಥವಾ ಕೆಎಎಸ್ ಅಧಿಕಾರಿಯನ್ನು ಆಯುಕ್ತ ಹುದ್ದೆಗೆ ನೇಮಕ ಮಾಡುವುದರಿಂದ ಹುದ್ದೆಯಲ್ಲಿ ಇರುವವರು ಇದರ ನಿರ್ವಹಣೆ ಹೊಣೆ ನೋಡಿಕೊಳ್ಳುತ್ತಾರೆ. ಜತೆಗೆ ಬೇಕಾಗುವ ಮೂಲಸೌಲಭ್ಯವನ್ನು ಇಂಜಿನಿಯರ್‌ಗಳು ಅಂದಾಜು ಪಟ್ಟಿ ತಯಾರಿಸಿ ಆಡಳಿತ ಮಂಡಳಿ ಮುಂದೆ ಮಂಡಿಸಿ ಒಪ್ಪಿಗೆ ಪಡೆದು ಕಾಮಗಾರಿ ನಡೆಸಲಿದ್ದಾರೆ. ಹೀಗಾಗಿ ಪ್ರಾಧಿಕಾರ ನಗರಸಭೆ, ನಗರಪಾಲಿಕೆಯಂತೆಯೇ ಕಾರ್ಯ ನಿರ್ವಹಿಸಿ ತಮ್ಮ ವ್ಯಾಪ್ತಿಗೆ ಬೇಕಾದ ಸೌಲಭ್ಯವನ್ನು ತಾವೇ ರಚಿಸಿಕೊಳ್ಳಲು ಅವಕಾಶವಿದೆ.

ಬದಲಾಗಿದೆ ಹೆಸರು:

ಹಿಂದಿನ ಸರ್ಕಾರಗಳು ಹೊರಡಿಸಿದ್ದ ‘ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ’ ಹೆಸರನ್ನು ಈಗಿನ ಸರ್ಕಾರ ಬದಲಾವಣೆ ಮಾಡಿ ಅದೇ ವ್ಯವಸ್ಥೆಯನ್ನು ಮುಂದುವರಿಸಲು ಮುಂದಾಗಿದೆ. ಪ್ರಾಧಿಕಾರ ಹೆಸರನ್ನು ತೆಗೆದು ಮುಂಬಯಿಯಲ್ಲಿ ಇರುವಂತೆ ಪ್ರಾದೇಶಿಕ ಬಂಡವಾಳ ಹೂಡಿಕೆ ಕ್ಲಸ್ಟರ್ ಎಂದು ನಾಮಕರಣ ಮಾಡಲು ಹೊರಟಿದೆ. ಪ್ರಾಧಿಕಾರ ಅಥವಾ ಕ್ಲಸ್ಟರ್ ಯಾವುದಾದರೂ ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎನ್ನುವ ಒತ್ತಾಯ ಉದ್ಯಮಿಗಳದ್ದಾಗಿದೆ.

ಜನಪ್ರತಿನಿಧಿಗಳಿಂದಲೇ ಪ್ರಾಧಿಕಾರ ರಚನೆಗೆ ಅಡ್ಡಿ

ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾಧಿಕಾರ ರಚಿಸಲು ಸರ್ಕಾರ ಮುಂದಾಗಿದ್ದರೂ, ಪ್ರಾಧಿಕಾರ ಅನುಷ್ಠಾನಕ್ಕೆ ಜನಪ್ರತಿನಿಧಿಗಳಿಂದಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಂದ ಬರುವ ದೊಡ್ಡ ಮೊತ್ತದ ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ನಗರಸಭೆ, ನಗರಪಾಲಿಕೆಗಳು ಜನವಸತಿ ಇರುವ ಇನ್ನಿತರ ಬಡಾವಣೆಗಳಿಗೆ ಬಳಕೆ ಮಾಡುತ್ತಾ ಬರುತ್ತಿದೆ. ಪ್ರಾಧಿಕಾರ ರಚನೆಯಾದರೆ ಶೇ.70ರಷ್ಟು ಹಣ ಪ್ರಾಧಿಕಾರ ಬಳಸಿಕೊಂಡು ಶೇ.30ರಷ್ಟು ಹಣ ಮಾತ್ರ ಸ್ಥಳೀಯ ಸಂಸ್ಥೆಗಳಿಗೆ ಹೋಗುತ್ತದೆ. ಹೀಗಾಗಿ ದೊಡ್ಡ ಮೊತ್ತದ ತೆರಿಗೆ ಹಣ ಇಲ್ಲದೆ ತಾವು ಇಚ್ಚಿಸಿದ ಪ್ರದೇಶಗಳ ಅಭಿವೃದ್ಧಿ ಕುಂಠಿತಗೊಳ್ಳಲಿವೆ ಎನ್ನುವ ಲೆಕ್ಕಾಚಾರ ಜನಪ್ರತಿನಿಧಿಗಳದ್ದಾಗಿದೆ. ಹೀಗಾಗಿ ಪ್ರಾಧಿಕಾರ ರಚನೆಗೆ ಅಡ್ಡಿ ಪಡಿಸಲಾಗುತ್ತಿದೆ ಎನ್ನುವ ಮಾತುಗಳಿವೆ.

ಕೋಟ್

ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿ ಕಾಣದೆ ಸೊರಗುತ್ತಿವೆ. ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆಯಿಂದ ಶೇ.70ರಷ್ಟು ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಿದೆ. ಆಗಾಗಿ ಅದಷ್ಟು ಶೀಘ್ರ ಬಜೆಟ್‌ನಲ್ಲಿ ಮಾಡಿರುವ ಘೋಷಣೆಯಂತೆ ಪ್ರಾಧಿಕಾರ ರಚಿಸುವ ಮೂಲಕ ಅನುಕೂಲ ಮಾಡಿಕೊಡಬೇಕಿದೆ.

ಸುರೇಶ್‌ಕುಮಾರ್ ಜೈನ್, ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net