

ಗಂಗಾವತಿ: ನಗರದ ಕೊಟ್ಟೂರು ಬಸವೇಶ್ವರ ದೇವಾಲಯದ ವೇದಿಕೆಯಲ್ಲಿ ಗಾನಯೋಗಿ ಡಾ.ಪುಟ್ಟರಾಜ ಗವಾಯಿಗಳ 111ನೇ ಜಯಂತ್ಯುತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಡಾ. ಪಂಡಿತ್ ಪುಟ್ಟರಾಜ ಸಂಗೀತ ಕಲಾ ಪರಿಷತ್ ಮತ್ತು ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರಿಂದ ಸಂಗೀತೋತ್ಸವ ನಡೆಯಿತು.
ಕಲಾವಿದ ಡಾ.ಖಾಸೀಂಅಲಿ ಮುದ್ದಾಬಳ್ಳಿ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಸಂಗೀತ ಕಲಾವಿದರನ್ನು ನಿರ್ಲಕ್ಷಿಸಿದ್ದು ಸರಿಯಲ್ಲ. ಸಾಹಿತ್ಯಕ್ಕೂ, ಸಂಗೀತಕ್ಕೂ ಅವಿನಾಭಾವ ಸಂಬಂಧವಿದೆ. ಕಲಾವಿದರನ್ನು ಗೌರವಿಸುವುದರನ್ನು ಪರಿಷತ್ತು ಕಲಿಯಬೇಕಿದೆ ಎಂದರು.
ಹಿರಿಯ ಕಲಾವಿದರಾದ ಜುಜ್ಜವರಪು ನಾಗೇಶ್ವರರಾವ್, ವೆಂಕಟೇಶ್ ದಾಸನಾಳ, ವಿವಿಧ ಸಮಾಜದ ಮುಖಂಡರಾದ ಹೊಸಳ್ಳಿ ಶಂಕರಗೌಡ, ಮಲ್ಲಿಕಾರ್ಜುನಗೌಡ ಪಾಟೀಲ್, ಸುದರ್ಶನ್ ಜೋಶಿ, ಬಸವನಗೌಡ ಪಾಟೀಲ್, ದರೋಜಿ ನಾಗರಾಜ್ ಶೆಟ್ಟಿ, ರುದ್ರಯ್ಯಸ್ವಾಮಿ ಅಯೋಧ್ಯ, ಶಿಕ್ಷಕ ಮೈಲಾರಪ್ಪ ಇತರರಿದ್ದರು.