

ಹಾನಗಲ್ಲ: ತಾಲೂಕಿನಲ್ಲಿ ಈವರೆಗೆ ಸಮರ್ಪಕ ಮಳೆ ಆಗದಿರುವುದರಿಂದ ಬಿತ್ತನೆ ಪೂರ್ವ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ರೈತ ಸಮುದಾಯ ಮುಗಿಲಿನತ್ತ ಮುಖ ಮಾಡುವಂತಾಗಿದೆ.
ಪ್ರಸಕ್ತ ವರ್ಷ ಮುಂಗಾರು ಹಂಗಾಮು ಅವಧಿಗಿಂತ ಮೊದಲೇ ಆಗಮಿಸುತ್ತಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಮುಂಗಾರಿನ ಬಿತ್ತನೆಗಾಗಿ ಕೃಷಿಭೂಮಿಯಲ್ಲಿ ಸಿದ್ಧತೆ ಕೈಗೊಳ್ಳಲು ಬೇಸಿಗೆ ದಿನಗಳಲ್ಲಿ ಒಂದಷ್ಟು ಮಳೆಯಾಗಬೇಕಿತ್ತು. ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆಯಾಗಿದ್ದರೂ, ಹಾನಗಲ್ಲ ತಾಲೂಕಿನಲ್ಲಿ ವರುಣದೇವ ಮುನಿಸಿಕೊಂಡಿದ್ದಾನೆ.
ಏಪ್ರಿಲ್ನ ವಾಡಿಕೆ ಮಳೆ 43 ಮಿಮೀ ಪೈಕಿ 35 ಮಿಮೀನಷ್ಟು ಸುರಿದಿದ್ದು, 8 ಮಿ.ಮೀ. ಕೊರತೆಯಾಗಿದೆ. ಮೇನಲ್ಲಿ ವಾಡಿಕೆಯಂತೆ 74 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ, ಇದುವರೆಗೆ ಶೇ. 50ರಷ್ಟು ಮಳೆ ಕೊರತೆ ಕಂಡುಬಂದಿದೆ. ಹೀಗಾಗಿ, ತಾಲೂಕಿನ ಬಹುತೇಕ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕಾಣುತ್ತಿಲ್ಲ. ಇದರಿಂದ ಬಿತ್ತನೆಗೆ ಹಿನ್ನಡೆಯಾಗುವಂಥ ಲಕ್ಷಣ ಕಂಡುಬರುತ್ತಿದೆ.
ಬೇಸಿಗೆ ಅವಧಿಯಲ್ಲಿ ಬಿತ್ತನೆ ಮಾಡಿದ್ದ ಗೋವಿನಜೋಳ ಒಕ್ಕಣೆ ಕಾರ್ಯದಲ್ಲಿ ಹಾಗೂ ಕೃಷಿಭೂಮಿ ಮತ್ತೆ ಬಿತ್ತನೆಗೆ ಸರಿಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಆದರೆ, ಮಳೆಯಾಗದ್ದರಿಂದ ಭೂಮಿ ಹದಗೊಳಿಸಲು ಸಾಧ್ಯವಾಗುತ್ತಿಲ್ಲ. ಒಮ್ಮೆಲೆ ಮಳೆ ಹಿಡಿದರೆ ಬಿತ್ತನೆಗೆ ಸಾಧ್ಯವಾಗುವುದಿಲ್ಲ ಎಂಬ ಆತಂಕ ಇದೀಗ ರೈತರನ್ನು ಕಾಡಲಾರಂಭಿಸಿದೆ.
47 ಸಾವಿರ ಹೆಕ್ಟೇರ್ ಬಿತ್ತನೆ ಗುರಿ: ತಾಲೂಕಿನಲ್ಲಿ ಒಟ್ಟು 47 ಸಾವಿರ ಹೆಕ್ಟೇರ್ ಕೃಷಿ ಭೂಮಿಯಿದೆ. 30 ಸಾವಿರ ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದ ಪ್ರಮಾಣ ಕೇವಲ 14 ಸಾವಿರ ಹೆಕ್ಟೇರ್ಗೆ ಇಳಿಕೆಯಾಗಿದೆ. ಅಪರೂಪವಾಗಿದ್ದ ಗೋವಿನಜೋಳ ಈಗ 25 ಸಾವಿರ ಹೆಕ್ಟೇರ್ಗೆ ವ್ಯಾಪಿಸಿದೆ. ಕಬ್ಬು 2700 ಹೆಕ್ಟೇರ್, ಸೋಯಾಬೀನ್ 2397 ಹೆಕ್ಟೇರ್, ಹತ್ತಿ 3122 ಹೆಕ್ಟೇರ್, ಶೇಂಗಾ 850 ಹೆಕ್ಟೇರ್ನಲ್ಲಿ ಬೆಳೆಯುತ್ತಿದ್ದಾರೆ. ಕಡಿಮೆ ಮಳೆ ಹಾಗೂ ನಿರ್ವಹಣೆಯೂ ಸುಲಭ ಎಂಬ ಕಾರಣಕ್ಕೆ ಗೋವಿನಜೋಳವೇ ಮುಖ್ಯ ಬೆಳೆಯಾಗಿದೆ.
ರಿಯಾಯಿತಿ ದರದಲ್ಲಿ ಬೀಜ ಮಾರಾಟ: ತಾಲೂಕಿನಲ್ಲಿ 38 ಸಾವಿರ ರೈತರಿದ್ದಾರೆ ಎಂದು ಅಂದಾಜಿಸಲಾಗಿದೆ. 13 ಸಾವಿರ ರೈತರಿಗೆ 2024ರ ಕೃಷಿ ವರ್ಷದಲ್ಲಿ 1627 ಕ್ವಿಂಟಾಲ್ ಭತ್ತ, 408 ಕ್ವಿಂಟಾಲ್ ಗೋವಿನಜೋಳ, 1121 ಕ್ವಿಂಟಾಲ್ ಸೋಯಾಅವರೆ, 69 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ವಿತರಿಸಲಾಗಿದೆ. ಪ್ರಸ್ತುತ ವರ್ಷ ಕೃಷಿ ಇಲಾಖೆ ಹೆಚ್ಚಿನ ಬಿತ್ತನೆ ಬೀಜಗಳ ದಾಸ್ತಾನಿಗೆ ಬೇಡಿಕೆ ಸಲ್ಲಿಸಿದ್ದು, ತಾಲೂಕಿನ 7 ಕೇಂದ್ರಗಳಲ್ಲಿ ಮೇ 25ರಿಂದ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.
ಕಾಂಪ್ಲೆಕ್ಸ್ ಗೊಬ್ಬರ ಬಳಸಲು ಸಲಹೆ: ಕಳೆದ ವರ್ಷ 3860 ಟನ್ ಡಿಎಪಿ, 13900 ಟನ್ ಯೂರಿಯಾ, 525 ಟನ್ ಎಂಒಪಿ, 1 ಸಾವಿರ ಟನ್ ಕಾಂಪ್ಲೆಕ್ಸ್ ರಾಸಾಯನಿಕ ಗೊಬ್ಬರ ತಾಲೂಕಿನಲ್ಲಿ ಮಾರಾಟವಾಗಿದೆ. ಪ್ರಸ್ತುತ ವರ್ಷ 6607 ಟನ್ ಡಿಎಪಿ, 11550 ಟನ್ ಯೂರಿಯಾ, 6746 ಟನ್ ಕಾಂಪ್ಲೆಕ್ಸ್ , 1330 ಟನ್ ಪೊಟ್ಯಾಷ್ ಗೊಬ್ಬರಕ್ಕೆ ಕೃಷಿ ಇಲಾಖೆ ಬೇಡಿಕೆ ಸಲ್ಲಿಸಿದೆ. ಆದರೆ, ಸದ್ಯ 308 ಟನ್ ಡಿಎಪಿ, 2900 ಟನ್ ಯೂರಿಯಾ, 1467 ಟನ್ ಕಾಂಪ್ಲೆಕ್ಸ್ , 323 ಟನ್ ಪೊಟ್ಯಾಷ್ ದಾಸ್ತಾನು ಇದೆ. ಕಾರ್ಖಾನೆಗಳಲ್ಲಿ ಡಿಎಪಿ ಉತ್ಪಾದನೆ ಕುಸಿತವಾಗಿದೆ. ಕಾಂಪ್ಲೆಕ್ಸ್ ಗೊಬ್ಬರಗಳಲ್ಲಿ ಸಾರಜನಕ, ರಂಜಕ, ಪೊಟ್ಯಾಷ್ಗಳ ಮಿಶ್ರಣವಿದ್ದು, ಬೆಳೆಗಳಿಗೆ ಉಪಯುಕ್ತವಾಗಿದೆ. ರೈತರು ಡಿಎಪಿ, ಯೂರಿಯಾಕ್ಕೆ ಜೋತು ಬೀಳದೆ ಕಾಂಪ್ಲೆಕ್ಸ್ ಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.
ಒಣ ಬಿತ್ತನೆಗೆ ರೈತರು ಮುಂದಾಗಬಾರದು. ಭೂಮಿಯಲ್ಲಿ ಸೂಕ್ತ ತೇವಾಂಶವಿದ್ದಲ್ಲಿ ಬಿತ್ತನೆ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿತ್ತಿದ ಬೀಜ ಸರಿಯಾಗಿ ಮೊಳಕೆಯಾಗದೆ ಮರು ಬಿತ್ತನೆ ಮಾಡುವಂತಾಗುತ್ತದೆ. ಡಿಎಪಿ ಬದಲಾಗಿ ಅದಕ್ಕೆ ಸಮನಾದ ಸಂಯೋಜನೆಯ ರಸಗೊಬ್ಬರ ದಾಸ್ತಾನು ಇದೆ. ರೈತರು ಡಿಎಪಿಗೆ ಪರ್ಯಾಯವಾಗಿ ಬೇರೆ ಸಂಯೋಜನೆಯ ರಸಗೊಬ್ಬರ ಬಳಸಲು ಮುಂದಾಗಬೇಕು. ಯಾವುದೇ ಬಿತ್ತನೆ ಬೀಜದ ಕೊರತೆ ಆಗುವುದಿಲ್ಲ. | ಮಾರುತಿ ಅಂಗರಗಟ್ಟಿ, ಸಹಾಯಕ ಕೃಷಿ ನಿರ್ದೇಶಕ , ಹಾನಗಲ್ಲ