

ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ 1937ರಲ್ಲಿ ನಡೆದ ಅಮರ ಸುಳ್ಯ ಹೋರಾಟವೇ ಭಾರತದ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟ ಎಂದು ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಾಹಿತಿ ಸಹನಾ ಕಾಂತಬೈಲು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪೆರಾಜೆಯ ಜ್ಯೋತಿ ವಿದ್ಯಾಸಂಘ ಸಂಯುಕ್ತ ಆಶ್ರಯದಲ್ಲಿ ಪೆರಾಜಿಯ ಜ್ಯೋತಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ದಿ. ಗಂಗಾಧರ ಶೇಟ್ ಮತ್ತು ಸುಲೋಚನಾ ಬಾಯಿ ಸ್ಮಾರಕ ದತ್ತಿ ಕಾರ್ಯಕ್ರಮದಲ್ಲಿ ಕೊಡಗಿನ ಸ್ವಾತಂತ್ರ‍್ಯ ಹೋರಾಟಗಾರರ ನೆನಪಿನ ಉಪನ್ಯಾಸ ನೀಡಿ ಮಾತನಾಡಿದರು.
ಅಮರ ಸುಳ್ಯ ಹೋರಾಟದ ಕಾಲಘಟ್ಟದಲ್ಲಿ ಸುಳ್ಯ ಪ್ರದೇಶ ಕೊಡಗು ಜಿಲ್ಲೆಗೆ ಸೇರಿತ್ತು.
1957 ರಲ್ಲಿ ನಡೆದ ಸಿಪಾಯಿ ದಂಗೆ ಭಾರತದ ಮೊದಲ ಸ್ವಾತಂತ್ರ ಹೋರಾಟ ಎಂದು ಇತಿಹಾಸ ಹೇಳುತ್ತದೆ. ಆದರೆ ಅದಕ್ಕೂ 20 ವರ್ಷಗಳ ಹಿಂದೆ ಬ್ರಿಟೀಷರನ್ನು ನಮ್ಮ ನೆಲದಿಂದ ಓಡಿಸುವ ಪ್ರಯತ್ನ ನಡೆದಿದೆ. ಕೊಡಗಿದ ರಾಜ ಚಿಕ್ಕವೀರರಾಜೇಂದ್ರನನ್ನು ಬ್ರಿಟಿಷರು ರಾಜಪಟ್ಟದಿಂದ ಇಳಿಸಿದ ನಂತರ ಬ್ರಿಟಿಷ್ ಆಳ್ವಿಕೆ ಈ ಪ್ರದೇಶದಲ್ಲಿ ಪ್ರಾರಂಭವಾಯಿತು. ಅತಿಯಾದ ತೆರಿಗೆ ಮತ್ತು ದಬ್ಬಾಳಿಕೆ ಕಾರಣ ಜನರು ಬ್ರಿಟಿಷರ ವಿರುದ್ಧ ದಂಗೆ ಏಳುವ ಪ್ರಯತ್ನ ನಡೆಯಿತು. ಆ ಸಂದರ್ಭದಲ್ಲಿ ರಾಜಮನೆತನದ ಪ್ರತಿನಿಧಿ ಹೇಳಿಕೊಂಡು ಸ್ವಾಮಿ ಅಪರಾಂಪರ ಎನ್ನುವ ವ್ಯಕ್ತಿ ಇವರೆಲ್ಲರೂ ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿ ಬ್ರಿಟಿಷ್ ಧ್ವಜವನ್ನು ಕೆಳಗಿಳಿಸಿ ತಮ್ಮ ಧ್ವಜವನ್ನು ಏರಿಸಿ, 13 ದಿನಗಳ ಕಾಲ ಬ್ರಿಟಿಷರನ್ನು ನಮ್ಮ ನೆಲದಿಂದ ಹೊರಗಿಡುತ್ತಾರೆ ನಂತರ ಬ್ರಿಟಿಷರು ಬಹು ದೊಡ್ಡ ಸೈನ್ಯದೊಂದಿಗೆ ಬಂದು ಇವರನ್ನು ನಿಯಂತ್ರಣಕ್ಕೆ ತರುತ್ತಾರೆ ಎಂದು ಕೊಡಗಿನಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದ ಮೆಲುಕು ಹಾಕಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ ಕೇಶವ ಕಾಮತ್, 200 ವರ್ಷಗಳಿಗೂ ಹೆಚ್ಚು ನಮ್ಮನ್ನು ಆಳಿದ ಬ್ರಿಟಿಷರ ವಿರುದ್ಧ ಇಡೀ ದೇಶ ಒಂದಾಗಿ ಹೋರಾಡಿ ಸ್ವಾತಂತ್ರವನ್ನು ಗಳಿಸಿಕೊಂಡಿತು. ನಮ್ಮ ಕೊಡಗು ಜಿಲ್ಲೆ ಏನು ಆ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆದರೆ ಮಾಹಿತಿಯ ಕೊರತೆಯಿಂದಾಗಿ ನಮ್ಮ ಜಿಲ್ಲೆಯಲ್ಲಿ ನಡೆದÀ ಸ್ವಾತಂತ್ರದ ಹೋರಾಟಗಳು ಜನರನ್ನು ತಲುಪಲಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಪೆರಾಜೆಯ ಜ್ಯೋತಿ ವಿದ್ಯಾ ಸಂಘದ ಅಧ್ಯಕ್ಷ ಎನ್ ಎ ಜ್ಞಾನೇಶ್ ಮಾತನಾಡಿ ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ದೇಶಕ್ಕೆ ಸಿಕ್ಕ ಸ್ವಾತಂತ್ರ‍್ಯ ಮತ್ತು ಅದು ಸಿಗುವಲ್ಲಿ ನಮ್ಮ ಹಿರಿಯರು ಮಾಡಿದ ತ್ಯಾಗ ಬಲಿದಾನದ ಕುರಿತು ಮಾಹಿತಿ ನೀಡುವ ಇಂಥ ಕಾರ್ಯಕ್ರಮ ಮಾದರಿಯಾದದ್ದು ಎಂದರು.
ಸಂಪಾಜೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ ಪೆರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದತ್ತಿದಾನಿಗಳಾದ ಗೋಣಿಕೊಪ್ಪಲಿನ ಜಯಲಕ್ಷ್ಮಿ ಜ್ಯುವೆಲರಿ ಮಾಲೀಕÀ ಎಂ.ಜಿ. ಮೋಹನ್ ಅವರನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್, ಪೆರಾಜೆ ಗ್ರಾಮ ಪಂಚಾಯಿತಿಯ ಸದಸ್ಯ ಸುರೇಶ್ ಪೆರುಮುಂಡ, ಜ್ಯೋತಿ ಪ್ರೌಢಶಾಲೆಯ ಸಂಚಾಲಕರಾದ ಮುಡುಕಜೆ ಹರಿಶ್ಚಂದ್ರ, ಮುಖ್ಯೋಪಾಧ್ಯಾಯ ನಾಗರಾಜ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರು ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರು, ಹೋಬಳಿ ಕಾರ್ಯದರ್ಶಿ ಸಂಗೀತಾ ರವಿರಾಜ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಇದ್ದರು.