ಕಡೂರಿನಲ್ಲಿ ಮುಂದುವರಿಯಲಿದೆ ಮೈತ್ರಿ

KDR pp
ಕಡೂರು ಪುರಸಭೆ.
Published on

ಡೂರು: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಕ್ಕಾಗಿ ಲೆಕ್ಕಾಚಾರ ಸದ್ದಿಲ್ಲದೆ ನಡೆಯುತ್ತಿದೆ. ಮೊದಲ ಅವಧಿಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯೊಂದಿಗೆ ಎರಡೂವರೆ ವರ್ಷಗಳ ಕಾಲ ಸುಸೂತ್ರವಾಗಿ ಆಡಳಿತ ನಡೆಸಿದ್ದರು. 23 ಸದಸ್ಯಬಲದ ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಮೈತ್ರಿಯೇ ಮತ್ತೊಮ್ಮೆ ಮುಂದುವರಿಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಕಳೆದ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅವಧಿಯಲ್ಲಿ ಹೆಚ್ಚು ಬಾರಿ ಗೆದ್ದ ಸದಸ್ಯರಿಗೆ ಅಧಿಕಾರ ನೀಡುವ ಮೂಲಕ ಅಂದಿನ ಶಾಸಕ ಬೆಳ್ಳಿಪ್ರಕಾಶ್ ಚಾಣಾಕ್ಷತನ ಮೆರೆದಿದ್ದರು. ಪುರಸಭೆ ಆಡಳಿತದ ಜವಾಬ್ದಾರಿಯನ್ನು ಜೆಡಿಎಸ್ ಸದಸ್ಯ ಭಂಡಾರಿ ಶ್ರೀನಿವಾಸ್‌ಗೆ ಬಿಟ್ಟು ಕೊಡುವ ಮೂಲಕ ಕೊಟ್ಟ ಮಾತಿನಂತೆ ಜೆಡಿಎಸ್ ಸದಸ್ಯರಿಗೆ ಸಂಪೂರ್ಣ ಸ್ವಾತಂತ್ರೃ ನೀಡಿ, ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಉಳಿಸಿಕೊಂಡಿದ್ದರು. ಬಿಜೆಪಿ ಸದಸ್ಯರು ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದ ಅವಕಾಶ ಕಲ್ಪಿಸಿಕೊಡುವಂತೆ ಒಪ್ಪಂದ ಮಾಡಿಕೊಂಡಿದ್ದರು.
ಸದ್ಯ ಎರಡನೇ ಅವಧಿಗೆ ಜೆಡಿಎಸ್ ಸದಸ್ಯರ ಸರದಿ ಬಾಹ್ಯ ಬೆಂಬಲದ ನಿರೀಕ್ಷೆಯಲ್ಲಿ ಬಿಜೆಪಿ ಅಧಿಕಾರ ನಡೆಸಲು ಸಜ್ಜಾಗಿದೆ. ಜೆಡಿಎಸ್ ಸದಸ್ಯರೂ ಕೊಟ್ಟ ಮಾತಿಗೆ ಬದ್ಧರಾಗಿರುವುದಾಗಿ ತಿಳಿದುಬಂದಿದೆ.
ಇನ್ನು ಕ್ಷೇತ್ರದಲ್ಲಿ ಕೆ.ಎಸ್.ಆನಂದ್ ಶಾಸಕರಾಗಿರುವುದರಿಂದ ಸಹಜವಾಗಿಯೇ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ದಾಳ ಉರುಳಿಸುವ ಸಾಧ್ಯತೆ ಇದೆ. ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳಲ್ಲಿ ಎರಡನೇ ಅವಧಿಗೆ ನಮ್ಮವರೇ ಅಧ್ಯಕ್ಷ-ಉಪಾಧ್ಯಕ್ಷರಾಗಲಿದ್ದಾರೆ ಎಂಬ ಆತ್ಮವಿಶ್ವಾಸದೊಂದಿಗೆ ಸದಸ್ಯರು ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ಈಗಿರುವ ಎರಡನೇ ಅವಧಿಯ ಆಡಳಿತ ನಡೆಸುವವರು ನಾಲ್ವರು ಪಕ್ಷೇತರ ಸದಸ್ಯರ ವಿಶ್ವಾಸ ಪಡೆಯುವುದು ಮುಖ್ಯ. ಜತೆಗೆ ಈ ಅವಧಿಯಲ್ಲಿ ಪೂರ್ಣಾವಧಿಯಾಗಿ ಆಡಳಿತ ನಡೆಸುವುದು ಇಂದಿನ ಲೆಕ್ಕಚಾರಕ್ಕೆ ಕಷ್ಟಸಾಧ್ಯ. ಚುನಾವಣೆ ವೇಳಾಪಟ್ಟಿ ನಿಗದಿಗೊಂಡ ಬಳಿಕವೇ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net