ಸಚಿವ ತಿಮ್ಮಾಪುರ ಮೇಲಿನ ಆಪಾದನೆ ಸುಳ್ಳು; ಸುಭಾಷ ಕಾಲೇಬಾಗ

MADIGA PRESS MEET
ವಿಜಯಪುರದ ಖಾಸಗಿ ಹೊಟೇಲ್‌ನಲ್ಲಿ ಮಾದಿಗ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಸುಭಾಷ ಕಾಲೇಬಾಗ, ರಮೇಶ ಗುಬ್ಬೇವಾಡ, ಎಸ್.ಎನ್. ಮೂರ್ತಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸರಳ, ಸಜ್ಜನಿಕೆಯ ರಾಜಕಾರಣಿ ಮತ್ತು ದಲಿತ ಸಮುದಾಯದ ಹಿರಿಯ ನಾಯಕ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದ್ದು, ಮಾದಿಗ ಸಮುದಾಯ ಈ ಕುತಂತ್ರವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಮಾದಿಕ ಸಮುದಾಯದ ಮುಖಂಡ ಸುಭಾಷ ಕಾಲೇಬಾಗ ಹೇಳಿದರು.

ರಾಜ್ಯದಲ್ಲಿ ದಲಿತ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿ ಕೆಲವು ಹಿಂಬಾಲಕರ ಮೂಲಕ ಕುತಂತ್ರ ನಡೆಸಿದೆ. ಭ್ರಷ್ಟಾಚಾರದ ಆರೋಪ ಹೊರಿಸಿ ನಾಯಕರನ್ನು ಹತ್ತಿಕ್ಕಲಾಗುತ್ತಿದೆ. ಇದೀಗ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವ ಮೂಲಕ ಆರ್.ಬಿ. ತಿಮ್ಮಾಪುರ ಅವರ ಘನತೆಗೆ ಕುಂದು ತರುವ ಪ್ರಯತ್ನ ನಡೆದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಮಾದಿಗ ಸಮುದಾಯದವರೆಂಬ ಕಾರಣಕ್ಕಾಗಿಯೇ ಆರ್.ಬಿ. ತಿಮ್ಮಾಪುರ ಅವರನ್ನು ಗುರಿಯಾಗಿಸಿಕೊಂಡು ಇಲ್ಲ ಸಲ್ಲದ ಟೀಕೆ ಮಾಡಲಾಗುತ್ತಿದೆ. ಭ್ರಷ್ಟಾಚಾರದ ಆರೋಪ ಹೊರಿಸಲಾಗುತ್ತಿದೆ. ಮದ್ಯ ಮಾರಾಟ ಸಂಘದ ಅಧ್ಯಕ್ಷ ಗುರುಸ್ವಾಮಿ ಮೂಲಕ ದೂರು ಕೊಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ. ಈ ಗುರುಸ್ವಾಮಿಯೊಬ್ಬ ನಿಯಮ ಬಾಹಿರವಾಗಿ ಮದ್ಯದ ಮಳಿಗೆ ನಡೆಸುತ್ತಿದ್ದು, ಅದಕ್ಕಾಗಿ ಸಹಕಾರ ನೀಡಬೇಕೆಂದು ಕೋರಿದ್ದ. ದಕ್ಷ, ಪ್ರಾಮಾಣಿಕತೆಗೆ ಹೆಸರಾದ ತಿಮ್ಮಾಪುರ ಅವರು ಅದಕ್ಕೆ ಅನುಮತಿ ನೀಡದ ಹಿನ್ನೆಲೆ ಗುರುಸ್ವಾಮಿ ಇಲ್ಲ ಸಲ್ಲದ ಕಥೆ ಕಟ್ಟುತ್ತಿದ್ದಾನೆಂದು ಹರಿಹಾಯ್ದರು.

ಇನ್ನೋರ್ವ ಮುಖಂಡ ರಮೇಶ ಗುಬ್ಬೇವಾಡ ಮಾತನಾಡಿ, ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ತನ್ನ ಬೇಳೆ ಬೇಯಿಸಿಕೊಳ್ಳಲು ಈ ರೀತಿ ತಿಮ್ಮಾಪುರ ಅವರ ಮೇಲೆ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ. ರೀತಿ ರಿವಾಜು ಮೀರಿ ಮದ್ಯ ಮಾರಾಟ ಮಳಿಗೆ ನಡೆಸುತ್ತಿರುವುದರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದ್ದಂತೆ ಈ ರೀತಿ ಆಪಾದನೆ ಶುರುವಾಗಿದೆ. ಇಡೀ ರಾಜ್ಯದ ಸನ್ನದುದಾರರು ಗುರುಸ್ವಾಮಿ ಜೊತೆ ಇಲ್ಲ ಎಂದರು.

ಮಾದಿಗರ ಕಣ್ಮಣಿ ತಿಮ್ಮಾಪುರ ಅವರ ಘನತೆಗೆ ಕುಂದುಂಟಾಗಲು ಸಮಾಜ ಬಿಡಲ್ಲ. ಇಡೀ ಸಮುದಾಯ ತಿಮ್ಮಾಪುರ ಅವರ ಬೆನ್ನಿಗೆ ನಿಲ್ಲಲಿದೆ ಎಂದರು.

ಮುಖಂಡರಾದ ಎಸ್.ಎನ್. ಮೂರ್ತಿ, ಸಾಗರ ಸಾವಳಸಂಗ, ಧರ್ಮರಾಜ ಹೊಸೂರ, ವಸಂತ ಹೊನಮೋಡೆ, ಸಂಪತಕುಮಾರ ಯಡಹಳ್ಳಿ, ರಾಘವೇಂದ್ರರಾವ ವಡವಡಗಿ, ಸಾಗರ ಸಾವಳಸಂಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net