ಎಚ್ಚರಿಕೆ ಘಂಟೆ ಬಾರಿಸುತ್ತಿದೆ ದೀವಗಿಯ ದರೆ, ಚತುಷ್ಪಥದುದ್ದಕ್ಕೂ ದುರಂತಗಳ ಸರಮಾಲೆ, ಗುಡ್ಡ ಕುಸಿದರೆ ಕತ್ತಲಲ್ಲಿ ಕುಮಟಾ

KMT STORY
Published on


ಶಂಕರ ಶರ್ಮಾ ಕುಮಟಾ
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಗುಡ್ಡ ಕುಸಿತಕ್ಕೆ ಪ್ರಾಣ ಬಲಿ ನೀಡಿದ ದೀವಗಿಯ ತಂಡ್ರಕುಳಿಗೆ ಕೆಲವೇ ನೂರು ಮೀಟರ್ ದೂರದಲ್ಲಿ ಇನ್ನೊಂದೆರಡು ಅಪಾಯಕಾರಿ ಕಡಿದಾದ ದರೆಗಳು ಕುಸಿದು ಚತುಷ್ಪಥವನ್ನು ನುಂಗುವ ಸ್ಥಿತಿಯಲ್ಲಿವೆ.


ಒಟ್ಟು 758 ಕಿ.ಮೀ. ಉದ್ದದ ರಾ.ಹೆ. 66ರ ಚತುಷ್ಪಥ ಕಾಮಗಾರಿಯನ್ನು ಕಳೆದ ಹತ್ತು ವರ್ಷದಿಂದ ಐಆರ್​ಬಿ ಗುತ್ತಿಗೆ ಕಂಪನಿ ಪಡೆದಿದೆ. ಯಾರು ಏನೇ ಬದಲಾದರೂ ಚತುಷ್ಪಥ ಯೋಜನೆ ತನ್ನ ಸ್ವರೂಪ, ಗುಣಮಟ್ಟ, ಸುರಕ್ಷತೆ ವಿಚಾರದಲ್ಲಿ ಬದಲಾಗದೇ ರಾತ್ರಿ ಕಂಡ ಬಾವಿಯಂತಾಗಿದೆ. ಕಾಮಗಾರಿ ಸಂದರ್ಭದಲ್ಲಿ ಪಶ್ಚಿಮಘಟ್ಟ ಹಾಗೂ ಕರಾವಳಿಯ ನಿಸರ್ಗ ವಿಶೇಷತೆಗಳನ್ನು ಮತ್ತು ಮಹತ್ವಗಳನ್ನು ಅರಿಯದೇ, ಮಾಡಲೇ ಬಾರದ್ದನ್ನು ಮಾಡಿದ್ದಕ್ಕೆ ಸಾಕ್ಷಿಯಾಗಿ ಚತುಷ್ಪಥದುದ್ದಕ್ಕೂ ದುರಂತಗಳು ಘಟಿಸುತ್ತಲೇ ಇದೆ.

ದೀವಗಿಯ ತಂಡ್ರಕುಳಿ ಗ್ರಾಮದಲ್ಲೂ ಗುಡ್ಡಕುಸಿತದ ದುರಂತವಾಗಿತ್ತು. ಭಟ್ಕಳ ತುದಿಯಿಂದ ಕಾರವಾರದ ಗೋವಾ ಗಡಿಯವರೆಗೆ ನೂರಾರು ಕಡೆಗಳಲ್ಲಿ ಗುಡ್ಡ ಕುಸಿಯುತ್ತಲೇ ಇದೆ. ಹೀಗಾಗಿ ಶಿರೂರು ಘಟನೆ ಅನಿರೀಕ್ಷಿತವಲ್ಲ. ಅವೈಜ್ಞಾನಿಕವಾಗಿ ಕತ್ತರಿಸಲಾದ ಗುಡ್ಡ ದರೆಗಳು ಮಾತ್ರವಲ್ಲದೇ ಇಳಿಜಾರು ಮಾಡಿದ ಕಡೆಗಳಲ್ಲೂ ಗುಡ್ಡ ಕುಸಿದು ಉದುರುದುರಿ ಬೀಳುತ್ತಿದೆ. ಗುಡ್ಡ ಕತ್ತರಿಸುವಾಗ ಇಂಜಿನಿಯರ್ ಜ್ಞಾನ ಮಾತ್ರವಲ್ಲದೇ ಸಾಮಾನ್ಯ ಜ್ಞಾನವನ್ನೂ ಕಡೆಗಣಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅತ್ಯಂತ ಸೂಕ್ಷ್ಮವಾಗಿ ಪರಿಸರ ಗಮನಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾದ ಅಗತ್ಯತೆ ಇತ್ತು. ಹಾಗೇ ಮಾಡದೇ ಇದ್ದುದಕ್ಕೆ ಗುಡ್ಡಕುಸಿತ ಎದುರಿಸಬೇಕಿದೆ. ಅವೈಜ್ಞಾನಿಕತೆಯ ಕಾರಣಕ್ಕೆ ಅಪಘಾತಗಳು ಹೆಚ್ಚುತ್ತಿವೆ.


ತಾಲೂಕಿನ ಬರ್ಗಿಯಲ್ಲಿ ಗುರುವಾರ ಬೆಳಗ್ಗೆ ಗುಡ್ಡ ಕುಸಿತವಾಗಿ ಹೆದ್ದಾರಿಯಲ್ಲಿ ಒಮ್ಮುಖ ಸಂಚಾರ ನಿಗದಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ತಂಡ್ರಕುಳಿ ಸನಿಹದ ದೀವಗಿಯಲ್ಲಿ ಬರೋಬ್ಬರಿ 200 ಅಡಿಯಷ್ಟು ಎತ್ತರದ ದರೆಯೊಂದು ಸಂಭವನೀಯ ದೊಡ್ಡ ಪ್ರಮಾಣದ ಕುಸಿತದ ಅಪಾಯದಲ್ಲಿದೆ. ಈ ದರೆಯ ಅಂಚಿನಲ್ಲಿ ಹೈಟೆನ್ಶನ್ ವಿದ್ಯುತ್ ಸಂಪರ್ಕದ ಕಂಬವೂ ಇದೆ. ದರೆಯ ಕೆಳಭಾಗದಲ್ಲಿ ಚತುಷ್ಪಥದ ಅಂಚಿಗೆ ಎರಡೂ ದಿಕ್ಕಿನಲ್ಲಿ ಹತ್ತಾರು ಜನವಸತಿ ಇದೆ. ಇಲ್ಲಿ ಗುಡ್ಡದಂಚಿನ ಸಂಚಾರ ಭಯಹುಟ್ಟಿಸುತ್ತದೆ. ಇಲ್ಲಿನ ಗುಡ್ಡಕುಸಿತದ ಅಪಾಯದ ಬಗ್ಗೆ ಹಲವಾರು ಬಾರಿ ಸರ್ಕಾರದ, ಜಿಲ್ಲಾಡಳಿತದ ಗಮನ ಸೆಳೆಯಲಾಗಿದೆ. ಶಾಸಕ ದಿನಕರ ಶೆಟ್ಟಿ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದಾರೆ. ಮುಂಜಾಗರೂಕತೆಯಿಂದ ಸೂಕ್ತ ಕ್ರಮಕೈಗೊಳ್ಳಲು ಕೋರಿದ್ದಾರೆ. ದೀವಗಿಯಲ್ಲಿ ಮಾತ್ರವಲ್ಲದೇ ಮಿರ್ಜಾನದ ಖೈರೆ ಕ್ರಾಸ್ ಬಳಿಯೂ ಇಂಥದೇ ಸಮಸ್ಯೆ ಇದೆ.

ನಡೆದಿಲ್ಲ ಮಣ್ಣಿನ ಹಿಡಿತ, ಜಾರಿಕೆ ಸಾಮರ್ಥ್ಯ ಪರೀಕ್ಷೆ
ರಸ್ತೆ ನಿರ್ವಿುಸುವಾಗ ಪ್ರತಿ ಗುಡ್ಡ ಅಗೆಯುವಾಗಲೂ ಅಲ್ಲಿ ಒಂದು ಮೀಟರ್ ಆಳದ ಮಣ್ಣನ್ನು ತೆಗೆದುಕೊಂಡು ಹೋಗಿ ಅನಿಯಮಿತ ಸಂಕೋಚನ ಪರೀಕ್ಷೆ ಮಾಡಬೇಕಾಗುತ್ತದೆ. ಇದು ಅತ್ಯಂತ ಕಡಿಮೆ ವೆಚ್ಚದ ಸುಲಭದ ಪರೀಕ್ಷೆಯಾದೆ. ಇದರಿಂದ ಗುಡ್ಡದ ಮಣ್ಣಿನ ಹಿಡಿತ ಮತ್ತು ಜಾರಿಕೆ ಸಾಮರ್ಥ್ಯ ತಿಳಿಯುತ್ತದೆ. ಈ ಪರೀಕ್ಷೆಯ ಆಧಾರದಲ್ಲಿ ಗುಡ್ಡದ ಬದಿಯನ್ನು ಎಷ್ಟು ಇಳಿಜಾರು ಮಾಡಿದರೆ ಸುರಕ್ಷಿತ ಎಂದು ನಿರ್ಧರಿಸಬಹುದಾಗಿದೆ. ಒಂದೊಮ್ಮೆ ಅಷ್ಟೊಂದು ಗುಡ್ಡ ಅಗೆಯಲು ಸಾಧ್ಯವಿಲ್ಲದಿದ್ದರೆ ಸೂಕ್ತ ಕಾಂಕ್ರೀಟ್ ತಡೆಗೋಡೆ ನಿರ್ವಿುಸಬೇಕಾಗುತ್ತದೆ. ಆದರೆ, ಕಾರವಾರದಿಂದ ಭಟ್ಕಳ ತುದಿಯವರೆಗೆ ಎಲ್ಲಿಯೂ ಇಂಜಿನಿಯರಿಂಗ್ ಕಲಿಕೆಯಲ್ಲಿ ಬರುವ ಮಣ್ಣಿನ ಯಂತ್ರಶಾಸ್ತ್ರದ ಪಾಠ ವಾಸ್ತವದಲ್ಲಿ ಬಳಕೆಯೇ ಆಗಿಲ್ಲ ಎನ್ನಬಹುದಾಗಿದೆ. ದರೆಗೆ ಕಾಂಕ್ರೀಟ್ ತಡೆಗೋಡೆ ಎಲ್ಲಿಯೂ ಇಲ್ಲ. ತಂಡ್ರಕುಳಿ, ಖೈರೆಯಲ್ಲಿ ಗುಡ್ಡ ಕುಸಿತದ ಬಳಿಕ ಹಚ್ಚಿದ ಸಿಮೆಂಟ್ ತೇಪೆಯೂ ಅಲ್ಲಲ್ಲಿ ಬಿರುಕಾಗಿ ಉದುರುತ್ತಿರುವುದನ್ನು ಆಡಳಿತ ವ್ಯವಸ್ಥೆ ಗಮನಿಸಬೇಕಿದೆ.



ಗುಡ್ಡ ಕುಸಿತವಾದ ಶಿರೂರಿನಂತೆಯೇ ನಮ್ಮ ತಾಲೂಕಿನ ದೀವಗಿಯ ಸೇತುವೆಗೆ ಹತ್ತಿರದಲ್ಲಿ ಕಡಿದಾಗಿ ಗುಡ್ಡ ಕತ್ತರಿಸಲಾಗಿದೆ. ಇದೇ ಗುಡ್ಡದ ಮೇಲೆ ಅಂಚಿನಲ್ಲಿ ಹೈಟೆನ್ಶನ್ ವೈಯರ್ ಕಂಬದ ಮೂಲಕ ಕುಮಟಾಕ್ಕೆ ಸಂಪರ್ಕವಿದೆ. ಯಾವುದೇ ಗಳಿಗೆಯಲ್ಲೂ ಇಲ್ಲಿ ಗುಡ್ಡ ಕುಸಿತದ ಆತಂಕ ಇದೆ. ಇದು ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಇದು ಸಂಪೂರ್ಣ ಮಣ್ಣಿನ ಗುಡ್ಡವಾಗಿದ್ದು, ಬಂಡೆಗಲ್ಲುಗಳಿಲ್ಲ. ಇದನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ತ್ವರಿತವಾಗಿ ಸೂಕ್ತ ಕ್ರಮವಾಗಬೇಕು ಎಂದು ಅಧಿವೇಶನದಲ್ಲಿ ಕಂದಾಯ ಸಚಿವರ ಗಮನಕ್ಕೂ ತಂದಿದ್ದೇನೆ.| ದಿನಕರ ಶೆಟ್ಟಿ, ಕುಮಟಾ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net