

ಮುದ್ದೇಬಿಹಾಳ: ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ಪ್ರತಿಭಾವಂತ ಬಡಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿಸಿದ ಅಹಿಲ್ಯಾದೇವಿ ಹೋಳ್ಕರ್ ವಿದ್ಯಾಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ಪಾಲಕರು, ಹಿತೈಷಿಗಳು, ಸಾರ್ವಜನಿಕರ ಪ್ರೋತ್ಸಾಹ ಹಾಗೂ ಸಿಬ್ಬಂದಿ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಅಭ್ಯುದಯ ಸೈನ್ಸ್, ಕಾಮರ್ಸ್ ಪಿಯು ಕಾಲೇಜಿನ ಸಂಸ್ಥಾಪಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಹೇಳಿದರು.
ಸ್ಥಳೀಯ ಹುಡ್ಕೋ ಬಡಾವಣೆ ಬಳಿಯ ಅಹಿಲ್ಯಾದೇವಿ ಹೋಳ್ಕರ್ ಕಾಲನಿಯಲ್ಲಿನ ಕಾಲೇಜು ಆವರಣದಲ್ಲಿ ಶನಿವಾರ ಸಂಜೆ ನಡೆದ ಕಾಲೇಜಿನ 8ನೇ ವಾರ್ಷಿಕೋತ್ಸವ, ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸಾಂಸ್ಕೃತಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗುತ್ತಿಗೆದಾರನಾಗಿದ್ದ ನನಗೆ ಶಿಕ್ಷಣ ಸಂಸ್ಥೆ ಕಟ್ಟಲು ಪ್ರೇರೇಪಿಸಿದವರು ಹಿರಿಯ ಶಿಕ್ಷಣ ತಜ್ಞ ವೀರೇಶ ಹೂಲಿಕೇರಿ ಎನ್ನುವವರು. ಅವರ ಪ್ರೋತ್ಸಾಹದಿಂದಾಗಿ ಇಂದು ಈ ಸಂಸ್ಥೆ ಸಾಕಷ್ಟು ಹೆಸರು ಮಾಡಿದೆ. ಬಡಮಕ್ಕಳಿಗೆ, ಗ್ರಾಮೀಣ ಪ್ರತಿಭೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಪ್ರಾಥಮಿಕದಿಂದ ಹಿಡಿದು ಪದವಿಯವರೆಗೂ ಶಾಲೆ, ಕಾಲೇಜು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಬಡಜನರ ಶಿಕ್ಷಣಕ್ಕಾಗಿ ಹೋರಾಡಿದ ಮಧ್ಯಪ್ರದೇಶದ ಇಂದೋರ್‌ನ ಮಹಾರಾಣಿ ಅಹಿಲ್ಯಾದೇವಿ ಹೋಳ್ಕರ್ ಅವರ ಹೆಸರಿಟ್ಟಿರುವುದು ನನ್ನ ಆಯ್ಕೆ, ನಿತ್ಯವೂ ಪ್ರಜ್ವಲವಾಗಿ ಎತ್ತರಕ್ಕೆ ಬೆಳೆಸುವ ಅಭ್ಯುದಯ ಹೆಸರಿಡಬೇಕೆನ್ನುವುದು ನನ್ನ ಹಿತೈಷಿಗಳ ಒತ್ತಾಸೆ. ಎರಡನ್ನೂ ಈ ಸಂಸ್ಥೆ ಮೂಲಕ ಈಡೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಂಜಿವಿಸಿ ಕಾಲೇಜಿನ ಶಿಕ್ಷಣಶಾಸ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎಸ್. ಹೂಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮದರಿಯವರು ನಿಸ್ವಾರ್ಥದಿಂದ ಮುದ್ದೇಬಿಹಾಳ, ಕೋಳೂರು-ಯರಗಲ್ಲ, ಅಡವಿಹುಲಗಬಾಳ ಭಾಗದಲ್ಲಿ ಸುಂದರ ಕಟ್ಟಡ ಹೊಂದಿರುವ ಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಪಟ್ಟಣದಲ್ಲಿ ವಸತಿ ಸಹಿತ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಇವೆ. ಬಡವರ ಪಾಲಿಗೆ ಇವು ಭಾಗ್ಯ ತಂದುಕೊಡುವಂತಿವೆ. ಕೋವಿಡ್ ಸಮಯದಲ್ಲಿ ಇವರ ಉಚಿತ ಶಿಕ್ಷಣ ಸೇವೆ ಸಮಾಜಕ್ಕೆ ಮಾದರಿಯಾಗಿದೆ. ಈಗಲೂ ಈ ಶಾಲೆ-ಕಾಲೇಜುಗಳಲ್ಲಿ ಬಡ ಪ್ರತಿಭಾವಂತರಿಗೆ ಉಚಿತ, ಅರ್ಹತೆ ಇದ್ದವರಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಬೋಧನೆ, ತರಬೇತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಬಿರಾದಾರ, ದಿ ಕರ್ನಾಟಕ ಕೋ ಆಪ್ ಬ್ಯಾಂಕ್ ಮಾಜಿ ನಿರ್ದೇಶಕಿ ಶ್ರೀದೇವಿ ಮದರಿ, ಸಂಸ್ಥೆಯ ಸಲಹಾ ಸಮಿತಿ ಸದಸ್ಯ ರವಿ ಜಗಲಿ, ಲೆಕ್ಕ ವ್ಯವಸ್ಥಾಪಕ ಬಿ.ಬಿ. ಬಿಜ್ಜೂರ, ಆಡಳಿತಾಧಿಕಾರಿ ಬಿ.ಜಿ. ಬಿರಾದಾರ, ಪದವಿ ಕಾಲೇಜಿನ ಪ್ರಾಂಶುಪಾಲ ಆರ್.ಎಸ್. ಜಿಡಗಿ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಂ. ಧನ್ನೂರ ಇತರರಿದ್ದರು.
ವಿವಿಧ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕ ಎಚ್.ಎಸ್. ಗೌಡರ ಸ್ವಾಗತಿಸಿದರು. ಉಪನ್ಯಾಸಕ ಬಿ.ಜಿ. ಬಿರಾದಾರ ವರದಿ ವಾಚಿಸಿದರು. ಉಪನ್ಯಾಸಕಿ ಎನ್.ಟಿ. ಗೌಡರ ನಿರೂಪಿಸಿದರು. ಪಿ.ಎಸ್. ಬಿರಾದಾರ ವಂದಿಸಿದರು.