

ಲೋಕಾಪುರ: ಪೊಲೀಸ್ ಅಂದರೆ ಭಯವಲ್ಲ, ಅದೊಂದು ಭರವಸೆ. ಸಾರ್ವಜನಿಕರ ಸೇವೆ ಹಾಗೂ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಪೊಲೀಸ್ ಇಲಾಖೆ ಇರುವುದೆಂದು ಜಿಲ್ಲಾ ಎಸ್‌ಪಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.
ಸಮೀಪದ ವರ್ಚಗಲ್ಲ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ಪೊಲೀಸರ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳಿಗೆ ತೆರಳಿ ಸ್ಥಳದಲ್ಲೇ ಅವರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರ್ವಜನಿಕರು ಸಮಸ್ಯೆಗಳಿದ್ದಾಗ ಠಾಣೆಗಳಿಗೆ ಬಂದು ದೂರು ನೀಡಿದಾಗ ದೂರು ಸ್ವೀಕರಿಸಿಕೊಂಡು ಅದನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ. ನೇರವಾಗಿ ಹಳ್ಳಿಗಳಿಗೆ ಹೋದರೆ ಅಲ್ಲಿನ ಸಮಸ್ಯೆ ತಿಳಿದು ಸ್ಥಳದಲ್ಲೇ ಪರಿಹಾರ ಕೊಡಿಸಲು ಸಾಧ್ಯವಾಗುತ್ತದೆ ಎಂದರು.
ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ರಾಜ್ಯದಲ್ಲೇ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಮೂರು ತಿಂಗಳಿಂದ ಈ ಕಾರ್ಯಕ್ರಮ ಮಾಡುತ್ತಿದ್ದು, ಇದರಿಂದ ಉತ್ತಮ ಲಿತಾಶ ಹಾಗೂ ಮೇಲಧಿಕಾರಿಗಳಿಂದ ಮೆಚ್ಚುಗೆ ಬರುತ್ತಿದೆ. ಸಾರ್ವಜನಿಕರಿಗೆ ತುರ್ತು ಸಮಸ್ಯೆಗಳಿದ್ದಾಗ 112ಗೆ ಕರೆ ಮಾಡಬೇಕು ಎಂದರು.
ಮುಧೋಳ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ರಾಕೇಶ ಬಗಲಿ, ಗ್ರಾಮದ ಹಿರಿಯರಾದ ಹನುಮಂತ ತುಳಸಿಗೇರಿ, ಶಂಕರಗೌಡ ಪಾಟೀಲ, ವಿಠ್ಠಲ ತುಳಸಿಗೇರಿ, ಭೀಮನಗೌಡ ಪಾಟೀಲ, ವಿಠ್ಠಲ ಪೂಜಾರಿ, ವಿಷ್ಣುಗೌಡ ಪಾಟೀಲ, ಕರಿಯಪ್ಪ ಪೂಜಾರಿ, ರವಿ ಪಾಟೀಲ, ದುರ್ಗಪ್ಪ ಮಾದರ ಇತರರಿದ್ದರು. ಎಂ.ಬಿ. ಮುದನೂರ ಕಾರ್ಯಕ್ರಮ ನಿರೂಪಿಸಿದರು.