ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸೇವೆ ಸಲ್ಲಿಸುವ ಉದ್ದೇಶ

17 srs 5
Published on

ಶಿರಸಿ: ಉತ್ತರ ಕನ್ನಡ ಹಾಗೂ ಕರಾವಳಿ ಭಾಗದ ಜನರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವ ಉದ್ದೇಶ ನಮ್ಮದಾಗಿದೆ ಎಂದು ಎಂ.ಎಂ. ಜೋಶಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಂಸ್ಥಾಪಕ ಪದ್ಮಶ್ರೀ ಡಾ ಎಂ.ಎಂ. ಜೋಶಿ ಹೇಳಿದರು.

ನಗರದ ಗಣೇಶ ನೇತ್ರಾಲಯದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಎಂ.ಎಂ. ಜೋಶಿ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದಿಗೆ ಗಣೇಶ ನೇತ್ರಾಲಯದ ‘ಸಂಗಮ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .

ಗಣೇಶ ನೇತ್ರಾಲಯವು ನಮ್ಮ ನೇತ್ರ ವಿಜ್ಞಾನ ಸಂಸ್ಥೆಯೊಂದಿಗೆ ಸಂಗಮಗೊಂಡಿದೆ. ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ನೇತ್ರ ವಿಜ್ಞಾನವನ್ನು ಪ್ರಾರಂಭಿಸಲಾಗಿದೆ ಎಂದರು.

ಖ್ಯಾತ ಸಾಹಿತಿ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾತನಾಡಿ, ಎರಡು ಸಮಾನ ಮನಸ್ಕರು ಸೇರಿದಾಗ ಬಹುದೊಡ್ಡ ಯಶಸ್ಸು ಸಿಗುತ್ತದೆ, ಸಮಾಜಕ್ಕೆ ಉತ್ತಮ ಕೊಡುಗೆ ಸಿಗುತ್ತದೆ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ, ಯುವಕರಲ್ಲಿ ಹೆಚ್ಚು ದೃಷ್ಟಿ ದೋಷ ಕಾಣಿಸಿಕೊಳ್ಳುತ್ತಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚಿನ ಮುತುವರ್ಜಿ ವಹಿಸಬೇಕಾಗಿದೆ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮನುಷ್ಯನ ದೇಹದಲ್ಲಿರುವ ಎಲ್ಲಾ ಅಂಗಾಂಗಗಳು ಉತ್ತಮವಾಗಿದ್ದರೆ ಮಾತ್ರ ಆತ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ವೈದ್ಯಕೀಯ ರಂಗ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ಜಿಲ್ಲೆಗೆ ಹೊಸ ದೃಷ್ಟಿ ಬಂದ ಅನುಭವವಾಗುತ್ತಿದೆ ಎಂದರು.</p><p>ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಜೋಶಿ, ಗಣೇಶ ನೇತ್ರಾಲಯದ ಮುಖ್ಯಸ್ಥ ಡಾ. ಶಿವರಾಮ ಕೆ.ವಿ., ಅನಂತ ಪದ್ಮನಾಭ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net