ಕೌಶಲ ಜತೆಗೆ ಉದ್ಯೋಗದ ಭದ್ರತೆ ಕಲ್ಪಿಸುವ ಗುರಿ

minister dr.sharana prakash patil
ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್
Published on

ಶಿವಮೊಗ್ಗ: ಸೇವಾಸಿಂಧು ಒಳಗೊಂಡಂತೆ ಯಾವುದೇ ಸರ್ವಿಸ್ ಸೆಂಟರ್‌ಗಳಿಂದ ಯುವನಿಧಿಗೆ ಆನ್‌ಲೈನ್ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಆರು ತಿಂಗಳು ಡಿಬಿಟಿ ಮೂಲಕ ಹಣ ಪಾವತಿ ಮಾಡುವುದೇ ನಮ್ಮ ಗುರಿಯಲ್ಲ. ನೋಂದಣಿ ಮಾಡಿದವರಿಗೆ ಕೌಶಲ ತರಬೇತಿ ನೀಡುವ ಜತೆಗೆ ಉದ್ಯೋಗದ ಭದ್ರತೆಯನ್ನು ಕಲ್ಪಿಸುವ ಯೋಜನೆ ಇದಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

ಈಗಾಗಲೇ ಮಂಗಳವಾರದವರೆಗೆ ಆನ್‌ಲೈನ್ ಮೂಲಕ 55 ಸಾವಿರ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ 5.29 ಲಕ್ಷ ಡಿಪ್ಲೊಮಾ ಪೂರ್ಣಗೊಳಿಸಿದವರು ಮತ್ತು ಪದವೀಧರರು ನೋಂದಣಿ ಮಾಡಿಕೊಳ್ಳಬಹುದೆಂಬ ಗುರಿ ಇದೆ. ಮುಂದಿನ ವರ್ಷ ಅದು ದುಪ್ಪಟ್ಟು (10 ಲಕ್ಷ) ಆಗುವ ನಿರೀಕ್ಷೆ ಇದೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಪ್ರಮಾಣಪತ್ರಗಳನ್ನು ನ್ಯಾಡ್ ಮೂಲಕ ಎಲ್ಲ ಕಾಲೇಜುಗಳಿಂದ ತರಿಸಿಕೊಳ್ಳಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸಕ್ತ ವರ್ಷ ಯುವನಿಧಿಗಾಗಿ 250 ಕೋಟಿ ರೂ. ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಮುಂದಿನ ವರ್ಷ 1,200 ಕೋಟಿ ರೂ. ಅದರ ಮುಂದಿನ ವರ್ಷಕ್ಕೆ 1,500 ಕೋಟಿ ರೂ. ಮೀಸಲಿಡಲಾಗುವುದು. ರಾಜ್ಯದ ಯುವಕರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆಯುತ್ತಿದೆ. ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸಿದಂತೆ ಆಗಲಿದೆ ಎಂದರು.
ಯುವನಿಧಿ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಿಲ್ಲ. ಡಿಪ್ಲೊಮಾ ಅಥವಾ ಪದವಿ ಪೂರ್ಣಗೊಳಿಸಿದವರು ಹಾಗೂ ಡಿಪ್ಲೊಮಾ ಮತ್ತು ಪದವಿ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ. ಆದರೆ ಪ್ರತಿಪಕ್ಷ ಬಿಜೆಪಿಯವರಿಗೆ ದೊಡ್ಡತನ ಎಂಬುದೇ ಇಲ್ಲ. ನಾವು ಪ್ರತಿಪಕ್ಷದಲ್ಲಿದ್ದಾಗ ಒಳ್ಳೆಯ ಕಾರ್ಯಕ್ರಮಗಳಿದ್ದರೂ ಸ್ವಾಗತಿಸುತ್ತಿದ್ದೇವು. ಆ ಗುಣ ಬಿಜೆಪಿ ನಾಯಕರಿಗಿಲ್ಲ. ಎಲ್ಲದರಲ್ಲೂ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net