ಯುವಕರಲ್ಲಿ ಇರಲಿ ಉತ್ತಮ ಉದ್ಯೋಗ ಪಡೆಯುವ ಗುರಿ

28bhr 1
Published on

ಬಾಳೆಹೊನ್ನೂರು: ಇಂದಿನ ಯುವಕರು ಉತ್ತಮ ಉದ್ಯೋಗ ತರಬೇತಿ ಪಡೆದು ಉತ್ತಮ ಉದ್ಯೋಗದ ಗುರಿ ಹೊಂದಿರಬೇಕು ಎಂದು ರಂಭಾಪುರಿ ಪೀಠದ ಲೆಕ್ಕಾಧಿಕಾರಿ ಸಂಕಪ್ಪ ಹೇಳಿದರು.

ರೇಣುಕಾ ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ತರಬೇತುದಾರರಿಗೆ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ ವಿತರಿಸುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ಉದಾಸೀನ ಮಾಡದೆ ಉದ್ಯೋಗ ಮಾಡಬೇಕು. ಇದರಿಂದ ಭಾರತ ಆರ್ಥಿಕವಾಗಿ ಬಲಿಷ್ಡ್ಟವಾಗುತ್ತದೆ. ಸ್ವಾತಂತ್ರೃ ಹೋರಾಟಗಾರರಾದ ಸುಭಾಷ್ ಚಂದ್ರಬೋಸ್ ಹಾಗೂ ಭಗತ್ ಸಿಂಗ್ ಅವರ ಬಲಿಷ್ಠ ಭಾರತದ ಕನಸು ನನಸಾಗಬೇಕಾದರೆ ಯುವ ಜನಾಂಗ ದೇಶಭಕ್ತಿ ಬೆಳೆಸಿಕೊಂಡು ಉದ್ಯೋಗಸ್ಥರಾಗಬೇಕು ಎಂದರು.

ಬಾಳೆಹೊನ್ನೂರು ವರ್ತಕರ ಸಂಘದ ಅಧ್ಯಕ್ಷ ಮನುಕುಮಾರ್ ಕಲ್ಲೇಶ್ವರ ಮಾತನಾಡಿ, ಐಟಿಐ ತರಬೇತಿ ಪಡೆದ ಯುವಕ ಮತ್ತು ಯುವತಿಯರಿಗೆ ಬಹಳ ಉದ್ಯೋಗವಕಾಶಗಳಿವೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಯುವಕರು ತುಂಬಾ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿ ಬಾಳೆಹೊನ್ನೂರಿಗೆ ಕೀರ್ತಿ ತಂದಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಉತ್ತಮ ಗುಣ ನಡತೆ ಮೈಗೂಡಿಸಿಕೊಂಡು ತಮ್ಮ ಪಾಲಕರು ಮತ್ತು ಸಂಸ್ಥೆಗೆ ಕೀರ್ತಿ ತರಬೇಕು ಎಂದರು.

ನಮ್ಮ ಸಂಸ್ಥೆಗೆ ಪ್ರಸ್ತುತ ಸಾಲಿನಲ್ಲಿ ಶೇ.88ರಷ್ಟು ಫಲಿತಾಂಶ ಬಂದಿದ್ದು, ಎಲೆಕ್ಟ್ರಿಷಯನ್ ವಿಭಾಗದ ವಿದ್ಯಾರ್ಥಿ ಲಕ್ಷ್ಮೀಶ.ವಿ.ಭಟ್ ಶೇ.90 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು. ತರಬೇತಿದಾರ ಲಕ್ಷ್ಮೀಶ.ವಿ.ಭಟ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಚಂದ್ರಶೇಖರ್, ಅಶೋಕ್,ಶ್ರೀನಿವಾಸ್, ರವಿರಾಜು, ಮಲ್ಲಿಕಾರ್ಜುನ, ಉಮೇಶ್, ಪ್ರಕಾಶ್, ಪ್ರತೀಕ್‌ಕಿಣಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net