ಅಲೆಮಾರಿಗಳನ್ನು ಮುಖ್ಯವಾಹಿನಿಗೆ ತರುವುದೇ ಉದ್ದೇಶ

7 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಲೆಮಾರಿ ಸಮುದಾಯದ ಮಕ್ಕಳಿಗೆ ಸಾಂಪ್ರದಾಯಿಕ ವೃತ್ತಿ ತರಬೇತಿ ಜತೆಗೆ ಅವರನ್ನು ಮುಖ್ಯವಾಹಿಗೆ ತರುವುದೇ ನಮ್ಮ ಮುಖ್ಯ ಉದ್ದೇಶ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ವೇದಿಕೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಒಕ್ಕೂಟ, ನಂದಾದೀಪ ಚಾರಿಟೇಬಲ್​ ಟ್ರಸ್ಟ್​ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಲೆಮಾರಿ ಸಾಂಸ್ಕೃತಿಕ ಕಲಾಮೇಳ ಹಾಗೂ ಪದ್ಮಶ್ರೀ ಪುರಸತರಿಗೆ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನೇಕ ಕಲೆಗಳನ್ನು ಕರಗತ ಮಾಡಿಕೊಂಡಿರುವ ಈ ಸಮುದಾಯಕ್ಕೆ ಇತಿಹಾಸ, ಪರಂಪರೆ ಇದೆ. ಆದರೆ ಹಿಂದಿನ ದಿನಗಳಲ್ಲಿ ಈ ಕಲೆಗೆ ಸಿಗುತ್ತಿದ್ದ ಮನ್ನಣೆ ಇತ್ತೀಚಿನ ದಿನಗಳಲ್ಲಿ ಸಿಗುತ್ತಿಲ್ಲ. ಹೀಗಾಗಿ ಈ ವೃತ್ತಿ ಅವಲಂಬಿತರು ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಆದರೆ ಉಪಜೀವನಕ್ಕೆ ಬೇರೊಂದು ವೃತ್ತಿ ಕಲಿಸುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಲಿಸಬೇಕಿದೆ. ಶಿಕ್ಷಣಕ್ಕೆ ಆದ್ಯತೆ ಸಿಗಬೇಕು ಎಂದರು.

ನೆಲೆ ಹಾಗೂ ನೆಲ ಇಲ್ಲದವರೇ ಅಲೆಮಾರಿಗಳು. ಇಂತಹ ಅಲೆ ಮಾರಿಗಳಲ್ಲಿ ಕೆಲವರು ಆಸೆ, ಆಮಿಷಕ್ಕೀಡಾಗಿ ಅನ್ಯ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಇದನ್ನು ತಡೆಯುವುದು ಅಗತ್ಯ. ಹಿಂದೂ ಸಂಸ್ಕೃತಿಯಲ್ಲಿ ಎಲ್ಲ ಸಮುದಾಯಗಳ ಜನರಿಗೂ ಗೌರವವಿದೆ. ಹಿಂದೂ ಧರ್ಮದ ವಿಶೇಷತೆ ತಿಳಿಸಿಕೊಡುವುದು ಅಗತ್ಯ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಅಲೆಮಾರಿ ಜನರಿಗೆ ನಗರದ ಸಿದ್ದೇಶ್ವರ ನಗರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಲೆಮಾರಿ ಪರಿಶಿಷ್ಟ ಜಾತಿಯವರು ನಗರದಲ್ಲಿರುವ ಪರಿಶಿಷ್ಟ ಜನರೊಂದಿಗೆ ಸ್ಪಧಿರ್ಸುವುದು ಕಷ್ಟಕರ. ಹೀಗಾಗಿ ಅವರಿಗೆ ಪ್ರತ್ಯೇಕ ಮೀಸಲಾತಿ ಒದಗಿಸುವುದು ಅಗತ್ಯ ಎಂದರು.

ಪದ್ಮಶ್ರೀ ವೆಂಕಪ್ಪ ಸುಗತೇಕರ ಹಾಗೂ ಭೀಮವ್ವ ಶಿಳ್ಳೇಕ್ಯಾತರ ಅವರಿಗೆ ಸನ್ಮಾನಿಸಲಾಯಿತು. ಹಿರಿಯ ನ್ಯಾಯವಾದಿ ಅರುಣ ಜೋಶಿ, ಡಾ. ಸಾಬಣ್ಣ ತಳವಾರ, ಅಲೆಮಾರಿ ಕಾರ್ಯ ವಿಭಾಗದ ಪ್ರಮುಖ ಗ.ರಾ. ಸುರೇಶ, ಮಲ್ಲಪ್ಪ ಚೆನ್ನಬತ್ತಿ, ಇತರರು ಇದ್ದರು.

ಲೋಹಿತ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net