

ಜಮಖಂಡಿ: ಭಕ್ತರ ಭವರೋಗ ಕಳೆದು ಸೂರ್ಯ- ಚಂದ್ರರು ಇರುವವರೆಗೆ ಜ್ಞಾನದ ಮುತ್ತಾಗಿ ಹೋಗಿರುವ ವಿಜಯಪುರ ಜ್ಞಾನಯೋಗಾಶ್ರಮದ ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಭಗವಂತನ ಅವತಾರಿಗಳಾಗಿದ್ದರು ಎಂದು ಹಂಚಿನಾಳ ಭಕ್ತಿಯೋಗಾಶ್ರಮದ ಮಹೇಶಾನಂದ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಹುಲ್ಯಾಳ ಗುರುದೇವಾಶ್ರಮದ ಶ್ರೀ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಶ್ರೀ ಗುರುದೇವ ಸತ್ಸಂಗದ ಅಂಗವಾಗಿ ಭಾನುವಾರ ನಡೆದ ವೇದಾಂತ ಕೇಸರಿ ಮಲಿಕಾರ್ಜುನ ಶಿವಯೋಗಿಗಳು ಹಾಗೂ ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಲ್ಲಿಕಾರ್ಜುನ ಶಿವಯೋಗಿಗಳ ಜೀವನ ಸಂದೇಶ ಕುರಿತು ಆಶೀರ್ವಚನ ನೀಡಿದರು.
ವೇದಾಂತಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳು ಆರುವ ದೀಪ ಹಚ್ಚಲಿಲ್ಲ. ಆರದ ಜ್ಞಾನದೀಪ ಹಚ್ಚಿದರು. ಕೆಳಗೆ ಬಿದ್ದವರನ್ನು ಎತ್ತಿಹಿಡಿದು ತಾಯಿ, ಗುರುವಾಗಿದ್ದರು. ಭಕ್ತರಿಗೆ ಸಂಸ್ಕಾರ ನೀಡಿ ಜ್ಞಾನ ಹಂಚಿ ಮನೆ-ಮನಕ್ಕೆ ಜ್ಞಾನದ ದೀಪ ಹಚ್ಚುವ ಕಾಯಕ ಮಾಡಿದ ಯುಗ ಪುರುಷ ಎನಿಸಿದ್ದಾರೆ ಎಂದರು.
ಸಾಹಿತಿ ಪ್ರೊ. ಬಸವರಾಜ ಕಡ್ಡಿ ಮಾತನಾಡಿ, ಜ್ಞಾನಯೋಗಿ ಸಿದ್ಧೇಶ್ವರ ಮಹಾಸ್ವಾಮಿಗಳು ಉಪಮೆಗೆ ನಿಲುಕದ ಉಪಮಾತೀತರು, ಜೇಬಿಲ್ಲದಂಗಿಯ ವೈರಾಗಿ, ಅರಿವಿನ ಜೋಳಿಗೆ ಹಿಡಿದ ಜಂಗಮಯೋಗಿ, ಸರಳತೆಯ ಸಂತ, ದೈವಿಕತೆಯ ಚರಮೂರ್ತಿ ಆಗಿದ್ದರು. ಸಂಗ್ರಹ ಬುದ್ಧಿಯನ್ನು ಅಳಿದು, ಸಂಬಂಧಗಳ ವ್ಯಾಮೋಹ ಕಳೆದುಕೊಂಡು, ಅಧಿಕಾರ- ಅಂತಸ್ತಿನ ಬಣ್ಣ ಕಳಚಿಕೊಂಡು ಸದಾ ಪರಮಸುಖಿಯಾಗಿದ್ದರು. ಯಾವ ದೋಷಗಳಿಗೆ ಅಂಟಿಕೊಳ್ಳದ ನಿಜೈಕ್ಯರಾಗಿದ್ದರು. ಜ್ಞಾನದ ಅಗ್ನಿಯ ಸ್ಪರ್ಶದಿಂದ ಯಾವ ಅವಗುಣಗಳು ಅವರಲ್ಲಿರಲಿಲ್ಲ. ದೇಹವನ್ನು ದಂಡಿಸದೆ ಒಳಗಿನ ಪರಮಾತ್ಮನ ಅನುಭವಿಸುವ ಬೆಡಗನ್ನು ಅರಿತಿದ್ದರು ಎಂದು ತಿಳಿಸಿದರು.
ಮೈಗೂರ ಗುರುದೇವಾಶ್ರಮದ ಗುರುಪ್ರಸಾದ ಶ್ರೀಗಳು, ಸಿದ್ದಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಮಹಾದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದ ದಾಂಡೇಲಿಯ ವಲಯ ಅರಣ್ಯಾಧಿಕಾರಿ ಅಶೋಕ ಪಾಟೀಲ, ಬೆಳಗಾವಿಯ ಶ್ರೀ ಮಲ್ಲಿಕಾರ್ಜುನ ವಿದ್ಯಾಪೀಠದ ಅಧ್ಯಕ್ಷ ಜಿ.ಎಂ. ಪಾಟೀಲ, ಹುನ್ನೂರಿನ ಚಂದ್ರಶೇಖರ ಸಾವಳಗಿ, ಲಕ್ಷ್ಮೇಶ್ವರದ ಚಿದಾನಂದ ಪಾಟೀಲ, ವಿಜಯಲಕ್ಷ್ಮೀ ಪಾಟೀಲ, ಜಮಖಂಡಿಯ ವಿಮಲಾ ಬೊಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಶ್ರೀ ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಶಿವಾನಂದ ಬಾಡನವರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ. ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು. ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಶರಣು ಸಮರ್ಪಿಸಿದರು.