ಕಾಫಿತೋಟ ನಾಶದ ಕ್ರಮ ಸರಿಯಲ್ಲ

d3dae11a-0046-43cc-9b6f-2971330335f9
Published on

ಮಡಿಕೇರಿ: ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಸಾಕಷ್ಟು ಪೈಸಾರಿ ಭೂಮಿಯಿದ್ದರೂ ಸಾರ್ವಜನಿಕ ಸ್ಮಶಾನದ ಉದ್ದೇಶಕ್ಕಾಗಿ ಸಣ್ಣ ಬೆಳೆಗಾರನ ಕಾಫಿ ತೋಟವನ್ನು ನಾಶಗೊಳಿಸಲು ಕಂದಾಯ ಇಲಾಖೆ ಮತ್ತು ಕೆಲವು ಗ್ರಾಮಸ್ಥರು ಯತ್ನಿಸುತ್ತಿರುವ ಕ್ರಮ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ಘಟಕ ಸಂಚಾಲಕ ಲಕ್ಷ್ಮಣ ಹೇಳಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್ಲು ಶೆಟ್ಟಳ್ಳಿ ಗ್ರಾಮದಲ್ಲಿ ಪ್ರಸನ್ನ ಎಂಬವರು ೩೦ ಸೆಂಟ್ ಒತ್ತುವರಿ ಜಾಗದಲ್ಲಿ ಕಾಫಿ ಬೆಳೆದಿದ್ದು, ಇದೀಗ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕಾಗಿ ಕಾಫಿ ತೋಟವನ್ನು ನಾಶಪಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಒತ್ತುವರಿ ತೆರವುಗೊಳಿಸದಿದ್ದಲ್ಲಿ ದಂಡ ಹಾಕುವ ಮತ್ತು ಗ್ರಾಮದಿಂದ ಬಹಿಷ್ಕರಿಸುವ ಎಚ್ಚರಿಕೆಯನ್ನು ನೀಡಿದರು.


ಇದೇ ಗ್ರಾಮದಲ್ಲಿ ೫೦ ಎಕರೆಗೂ ಹೆಚ್ಚು ಪೈಸಾರಿ ಜಾಗವಿದ್ದರೂ, ಸಣ್ಣ ಬೆಳೆಗಾರನ ಸುಮಾರು ೩೦ ವರ್ಷದ ಹಳೆಯ ಕಾಫಿ ತೋಟವನ್ನು ಉದ್ದೇಶಪೂರ್ವಕವಾಗಿ ನಾಶ ಪಡಿಸಲು ಯತ್ನಿಸುತ್ತಿರುವ ಕ್ರಮ ಖಂಡನೀಯ. ಜಿಲ್ಲಾಧಿಕಾರಿಗಳಿಗೆ ಈ ಕುರಿತು ದೂರು ನೀಡಲಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯ ನಾಪಂಡ ಸುಬ್ಬಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net